ದೆವ್ವಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್! ಮುಂದೇನಾಯ್ತು?
ಶುಕ್ರವಾರ, 19 ನವೆಂಬರ್ 2021 (20:12 IST)
ಚೆನ್ನೈ : ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ದೆವ್ವಕ್ಕೆ ಹೆದರಿ ತಮ್ಮ ಪೊಲೀಸ್ ಕ್ವಾರ್ಟರ್ಸ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಲ್ಲಕುರಿಚಿ ಜಿಲ್ಲೆಯ ಪೆರುಂಬಕ್ಕಂ ಪ್ರದೇಶದವರಾದ ಪ್ರಭಾಕರನ್ ಎಂಬ 33 ವರ್ಷದ ಪೊಲೀಸ್ ತಮ್ಮ ಪೊಲೀಸ್ ಕ್ವಾರ್ಟರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಡಲೂರು ಸಶಸ್ತ್ರ ಪೊಲೀಸ್‌ನಲ್ಲಿ ಮೊದಲ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರಭಾಕರನ್ ವಿಷ್ಣುಪ್ರಿಯಾ ಅವರನ್ನು ಮದುವೆಯಾಗಿದ್ದರು. ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದರು. ಕಡಲೂರಿನ ಸಶಸ್ತ್ರ ಪೊಲೀಸ್ ಠಾಣೆಯ ಕ್ವಾರ್ಟರ್ಸ್ನಲ್ಲಿ ಅವರ ಕುಟುಂಬ ವಾಸವಾಗಿತ್ತು. ಪ್ರಭಾಕರನ್ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.
ಇತ್ತೀಚೆಗೆ, ಪ್ರಭಾಕರನ್ ಅವರ ಕನಸಿನಲ್ಲಿ ಬೆಂಕಿಯಲ್ಲಿ ಸುಟ್ಟುಹೋದ ಮಹಿಳೆಯೊಬ್ಬರು ಬಂದು ಕತ್ತು ಹಿಸುಕಲು ಪ್ರಯತ್ನಿಸಿದ್ದಳು. ಈ ಬಗ್ಗೆ ಅವರು ತಮ್ಮ ಸ್ನೇಹಿತರು ಹಾಗೂ ಮನೆಯವರ ಬಳಿ ಹೇಳಿಕೊಂಡಿದ್ದರು. ಯಾಕೆ ತನಗೆ ಹೀಗೆ ಕನಸು ಬೀಳುತ್ತಿದೆ ಎಂಬ ಬಗ್ಗೆ ಪ್ರಭಾಕರನ್ ಜ್ಯೋತಿಷಿಯನ್ನು ಸಂಪರ್ಕಿಸಿದ್ದರು. ಅವರು ಇದು ಪ್ರೇತ ಅಥವಾ ಆತ್ಮದ ಕಾಟವಿರಬಹುದು ಎಂದಿದ್ದರು. ಹೀಗಾಗಿ, 15 ದಿನಗಳ ಕಾಲ ಅನಾರೋಗ್ಯದ ರಜೆ ಪಡೆದಿದ್ದ ಪ್ರಭಾಕರನ್ ತನ್ನ ಪೊಲೀಸ್ ಕ್ವಾರ್ಟರ್ಸ್ನ ಪೂಜಾ ಕೊಠಡಿಯಲ್ಲಿ ಬೀಗ ಹಾಕಿಕೊಂಡಿದ್ದರು.
ಕನಸಿನಲ್ಲಿ ಬಂದು ತನ್ನನ್ನು ಕಾಡುತ್ತಿದ್ದ ದೆವ್ವದ ಭಯದಿಂದ ಪ್ರಭಾಕರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಡಲೂರು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನೂ ವಿಚಿತ್ರವೆಂದರೆ, ಪ್ರಭಾಕರನ್ ಅವರ ಕನಸಿನಲ್ಲಿ ಬರುತ್ತಿದ್ದಂತೆ ಈ ಪ್ರದೇಶದಲ್ಲಿನ ಸಶಸ್ತ್ರ ಪಡೆಗಳ ಕ್ವಾರ್ಟರ್ಸ್‌ನಲ್ಲಿ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದರು!