ಅಮಿತ್ ಶಾ ಸೋದರಳಿಯನಂತೆ ಪೋಸ್ ನೀಡಿ ಬಿಜೆಪಿ ಶಾಸಕನಿಗೆ 80 ಸಾವಿರ ವಂಚಿಸಿದ ಭೂಪ

ಶುಕ್ರವಾರ, 29 ಜುಲೈ 2016 (13:48 IST)
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೋದರಳಿಯ ಎಂದು ಹೇಳಿಕೊಂಡ ಯುವಕನೊಬ್ಬ ಉಜ್ಜೈನಿಯ ಬಿಜೆಪಿ ಶಾಸಕ ಮೋಹನ್ ಯಾದವ್ ಅವರ ಆತಿಥ್ಯವನ್ನು ಅನುಭವಿಸಿದ್ದಲ್ಲದೇ 80 ಸಾವಿರ ರೂಪಾಯಿಗಳನ್ನು ಪಡೆದು ವಂಚಿಸಿದ ಘಟನೆ ವರದಿಯಾಗಿದೆ.
 
ಈ ಹಿಂದೆ ಇದೇ ಯುವಕ ರಾಜಸ್ಥಾನದ ಬಿಜೆಪಿ ಮುಖಂಡನನ್ನು ವಂಚಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ವಿರಾಜ್ ಶಾಹ್ ಪುಣೆಯ ನಿವಾಸಿಯಾಗಿದ್ದು ಅಮಿತ್ ಶಾಹ್ ಅವರ ಅಳಿಯ ಎಂದು ಪರಿಚಯಿಸಿಕೊಂಡ ಯುವಕ ತಾನು ಶಾಂತಿ ಎಕ್ಸ್‌ಪ್ರೆಸ್ ರೈಲಿನ ಎ1 ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದು ಲ್ಯಾಪ್‌ಟಾಪ್ ಸೇರಿದಂತೆ ದುಬಾರಿ ವಾಚ್, ಮೊಬೈಲ್ ಮತ್ತು ಚಿನ್ನಾಭರಣಗಳ ಕಳ್ಳತನವಾಗಿವೆ ಎಂದು ರೈಲ್ವಎ ಪೊಲೀಸರಿಗೆ ದೂರು ನೀಡಿ, ನಂತರ ಉಜ್ಜೈನಿಯ ಶಾಸಕ ಮೋಹನ್ ಯಾದವ್‌ಗೆ ಫೋನ್ ಕರೆ ಮಾಡಿ ಸಹಾಯ ಯಾಚಿಸಿದ್ದಾನೆ. 
 
ಶಾಸಕ ಯಾದವ್ ತಮ್ಮ ಸಹಚರ ನರೇಶ್ ಶರ್ಮಾನನ್ನು ರೈಲ್ವೆ ನಿಲ್ದಾಣಕ್ಕೆ ಕಳುಹಿಸಿದ್ದಲ್ಲದೇ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ರೈಲ್ವೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. 
 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಹತ್ತಿರವಾಗುವ ಬಯಕೆಯಿಂದ ಶಾಸಕ ಮೋಹನ್ ಯುವಕನಿಗೆ 50 ಸಾವಿರ ರೂಪಾಯಿಗಳ ನಗದು ನೀಡಿ, 15 ಸಾವಿರ ರೂಪಾಯಿ ಮೊಬೈಲ್ ನೀಡಿದ್ದಲ್ಲದೇ ಅಹ್ಮದಾಬಾದ್‌ಗೆ ತೆರಳುವ ವಿಮಾನ ಟಿಕೆಟ್‌ ಕೂಡಾ ಬುಕ್ ಮಾಡಿದ್ದಾರೆ. ಒಂದು ದಿನ ಯುವಕನನ್ನು ಉಜ್ಜೈನಿಯಲ್ಲಿರಿಸಿಕೊಂಡು ಮಹಾಕಾಳ್ ದರ್ಶನ ದೇವಾಲಯದ ದರ್ಶನ ಕೂಡಾ ಮಾಡಿಸಿದ್ದಾರೆ. 
 
ರೈಲ್ವೆ ಪೊಲೀಸರು ವಿಚಾರಣೆ ನಡೆಸಿದಾಗ ವಿರಾಜ್ ಹೇಳಿದ ಸೀಟು ಮಹಿಳೆಗೆ ಮೀಸಲಾಗಿರುವುದು ಕಂಡು ಬಂದಿದೆ. ವಿರಾಜ್ ನೀಡಿದ ಮೊಬೈಲ್ ಕೂಡಾ ಸ್ವಿಚ್ಚ ಆಫ್ ಆಗಿರುವುದು ಕಂಡು ಬಂದಿದೆ.
 
ಯುವಕ ವಿರಾಜ್ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಸತ್ಯ ಸಂಗತಿ ಹೊರಬಂದಿದೆ. ಅಮಿತ್ ಶಾ ಅವರಿಗೂ ಯುವಕನಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಕಂಡು ಬಂದಿದೆ. ನಂತರ ಶಾಸಕ ಮೋಹನ್ ಯಾದವ್‌ಗೆ ತಾನು ಮೋಸಹೋಗಿರುವುದು ಗೊತ್ತಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ