ಆಂಬ್ಯುಲೆನ್ಸ್ ಸಿಗಲಿಲ್ಲ, 20 ಕಿ.ಮೀ ನಡೆದೇ ಬಂದ ಗರ್ಭಿಣಿ: ರಸ್ತೆಯಲ್ಲೇ ಪ್ರಸವ

ಮಂಗಳವಾರ, 1 ಆಗಸ್ಟ್ 2017 (10:57 IST)
ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಾ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ. ಆಂಬ್ಯುಲೆನ್ಸ್ ಸಿಗದೇ ತುಂಬು ಗರ್ಭಿಣಿ 20 ಕಿ.ಮೀ ನಡೆದೇ ಬಂದು ರಸ್ತೆಯಲ್ಲಿ ಬಿದ್ದು, ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಆದರೆ, ಹುಟ್ಟಿದ ಹೆಣ್ಣುಮಗು ಬದುಕುಳಿಯಲಿಲ್ಲ.
 

ಬರ್ಮಾನಿ ಹಳ್ಳಿಯ ಗರ್ಭಿಣಿ ಬೀನಾಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆದರೆ, ಆಂಬ್ಯುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಬರ್ಹಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ 20 ಕಿ.ಮೀ ನಡೆದೇ ತೆರಳು ನಿರ್ಧರಿಸಿದರು. ಬರ್ಹಿ ಪಟ್ಟಣ ತಲುಪುವ ಹೊತ್ತಿಗೆ ಬೀನಾಗೆ ಪ್ರಸವ ವೇದನೆ ಹೆಚ್ಚಾಗಿ ರಸ್ತೆ ಮೇಲೆ ಹೆರಿಗೆಯಾಗಿದೆ. ನೆಲದ ಮೇಲೆ ಬಿದ್ದ ರಭಸದಿಂದ ಮಗು ಸ್ಥಳದಲ್ಲೇ ಅಸುನೀಗಿದೆ.

ಆರೋಗ್ಯ ಕೇಂದ್ರಕ್ಕೆ ಕರೆ ಮಾಡಿದರೂ ಆಂಬ್ಯುಲೆನ್ಸ್ ಬರಲಿಲ್ಲ. ಬೇರೆ ದಾರಿ ಇಲ್ಲದೆ ನಡೆಸಿಯೇ ಕರೆತಂದಿದ್ದಾಗಿ ಬೀನಾ ಪೋಷಕರು ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಾಧಿಕಾರಿ ಅಶೋಕ್, 7 ತಿಂಗಳಿಗೇ ಹೆರಿಗೆಯಾಗಿರುವುದರಿಂದ ಪ್ರಿಮೆಚೂರ್ ಬೇಬಿ ಬದುಕುಳಿದಿಲ್ಲ ಎಂದು ಹೇಳಿದ್ದಾರೆ. ದೇಶ ಎಷ್ಟೇ ಮುಂದುವರೆದರೂ ಹಳ್ಳಿಗಳೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಹಳ್ಳಿ ಜನರಿಗೆ ಆರೋಗ್ಯ ಸೇವೆ ಮರೀಚಿಕೆ ಎಂಬುದು ಇದರಿಂದ ಸಾಬೀತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ