ಗಂಗಾ ಸಂರಕ್ಷಣಾ ಪ್ರತಿಜ್ಞೆ ತೆಗೆದುಕೊಳ್ಳಲಿರುವ ರಾಷ್ಟ್ರಪತಿ ಕೋವಿಂದ್
ಶನಿವಾರ, 23 ಸೆಪ್ಟಂಬರ್ 2017 (10:18 IST)
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದಿನಿಂದ ಎರಡು ದಿನಗಳ ಕಾಲ ಉತ್ತರಾಖಂಡ್ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಹಿಂದೂ ಪುಣ್ಯಕ್ಷೇತ್ರಗಳಾದ ಬದ್ರಿನಾಥ, ಕೇದಾರನಾಥ ಮತ್ತು ಹರಿದ್ವಾರ ದರ್ಶನ ಮಾಡಲಿದ್ದಾರೆ.
ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾದ ಬಳಿಕ ತೆರಳುತ್ತಿರುವ ಮೊದಲ ರಾಜ್ಯ ಪ್ರವಾಸ ಇದಾಗಿದ್ದು, ಡೆಹರಾಡೂನ್ ನಲ್ಲಿರುವ ಜಾಲಿಗ್ರಾಟ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ರಾಜ್ಯಪಾಲ ಕೆ.ಕೆ.ಪಾಲ್ ಮತ್ತು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಬರಮಾಡಿಕೊಳ್ಳಲಿದ್ದಾರೆ.
ಮೊದಲು ಹರಿದ್ವಾರಕ್ಕೆ ತೆರಳಲಿರುವ ರಾಷ್ಟ್ರಪತಿ ಕೋವಿಂದ್, ಹರ್ ಕಿ ಪೌರಿ ಘಾಟ್ ಗೆ ತೆರಳಿ ಗಂಗೆಗೆ ಪೂಜೆ ಸಲ್ಲಿಸಲಿದ್ದಾರೆ. ಇದೇವೇಳೆ ಗಂಗಾ ನದಿ ಸಂರಕ್ಷಣಾ ಪ್ರತಿಜ್ಞೆ ತೆಗೆದುಕೊಳ್ಳಲಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಳಿಕ ಗಂಗಾ ನದಿ ಸಂರಕ್ಷಣಾ ಪ್ರತಿಜ್ಞೆ ತೆಗೆದುಕೊಳ್ಳುತ್ತಿರುವ ಎರಡನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ನಂತರ ಹರಿದ್ವಾರದಲ್ಲಿರುವ ಕುಷ್ಠರೋಗಿ ಮತ್ತು ವಿಕಲಚೇತನರಿಗೆ ಆಶ್ರಯ ನೀಡಿರುವ ಸೇವಾ ಕುಂಜ್ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ನಾಳೆ ಬೆಳಗ್ಗೆ ಉತ್ತರಾಖಂಡ್ ರಾಜಭವನದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಬಳಿಕ ಕೆದಾರನಾಥ ಮತ್ತು ಬದ್ರಿನಾಥ ಕ್ಷೇತ್ರಕ್ಕೆ ತೆರಳಲಿದ್ದಾರೆ. ಹೀಗಾಗಿ ಡೆಹರಾಡೂನ್ ಜಿಲ್ಲೆಯಾದ್ಯಂತ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಲಾಗಿದೆ. ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಅಲ್ಲಿನ ಸರ್ಕಾರ ತೆಗೆದುಕೊಂಡಿದೆ.