ರಾಷ್ಟ್ರಪತಿ ಭವನದಲ್ಲಿ ಈಗ ಸಸ್ಯಾಹಾರ ಮಾತ್ರ! ಕಾರಣವೇನು ಗೊತ್ತಾ?
ಸೋಮವಾರ, 21 ಆಗಸ್ಟ್ 2017 (09:47 IST)
ನವದೆಹಲಿ: ರಾಷ್ಟ್ರಪತಿ ಹುದ್ದೆ ಎಂಬುದು ದೇಶದ ಪರಮೋಚ್ಛ ಹುದ್ದೆ. ರಾಷ್ಟ್ರಪತಿ ಭವನಕ್ಕೂ ಅಷ್ಟೇ ಪ್ರಾಮುಖ್ಯತೆಯಿದೆ. ಇದೀಗ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಸ ರಾಷ್ಟ್ರಪತಿ ಭವನ ಸಂಪೂರ್ಣ ಸಸ್ಯಾಹಾರವಾಗಿದೆ!
ರಾಷ್ಟ್ರಪತಿಗಳ ಸೇವೆಗೆಂದೇ ಸುಪ್ರಸಿದ್ಧ ಬಾಣಸಿಗರ ತಂಡ ರಾಷ್ಟ್ರಪತಿ ಭವನದ ಅಡುಗೆ ಮನೆಯಲ್ಲಿರುತ್ತದೆ. ಆದರೆ ಈ ಅಡುಗೆ ಮನೆಯಲ್ಲಿ ಈಗ ನಾನ್ ವೆಜ್, ಮಸಾಲ ಭರಿತ ಆಹಾರಗಳಿಗೆ ಜಾಗವಿಲ್ಲವಂತೆ!
ಅದಕ್ಕೆ ಕಾರಣ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಹಾರ ಶೈಲಿ. ಸಂಪೂರ್ಣ ಸಸ್ಯಾಹಾರಿಯಾಗಿರುವ ಕೋವಿಂದ್ ತರಕಾರಿ ಬಳಸಿ ಮಾಡುವ ಅಡುಗೆಯನ್ನೇ ಇಷ್ಟಪಡುತ್ತಾರಂತೆ. ಅಷ್ಟೇ ಅಲ್ಲ, ಮಸಾಲ ಪದಾರ್ಥಗಳನ್ನು ಹಾಕಿದ ಆಹಾರಗಳನ್ನು ಅವರು ಇಷ್ಟಪಡುವುದಿಲ್ಲವಂತೆ. ಅಲ್ಲದೆ, ಕಡಿಮೆ ಉಪ್ಪು ಬಳಸಿ ಆಹಾರ ಸೇವಿಸುತ್ತಾರಂತೆ.
ರಾಷ್ಟ್ರಪತಿ ಹುದ್ದೆಯಲ್ಲಿರುವವರು ರಾಷ್ಟ್ರಪತಿ ಭವನದಲ್ಲಿ ಇರುವ ಬಾಣಸಿಗರ ಹೊರತಾಗಿ ತಮ್ಮ ಇಷ್ಟದ ಅಡುಗೆಯವರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಅವರಿಗಿಂತ ಮೊದಲು ರಾಷ್ಟ್ರಪತಿಯಾಗಿದ್ದ ಪ್ರತಿಭಾ ದೇವಿ ಸಿಂಗ್ ಕೂಡಾ ವೈಯಕ್ತಿಕ ಬಾಣಸಿಗರನ್ನು ಹೊಂದಿದ್ದರು.
ಆದರೆ ರಾಮನಾಥ್ ಗೆ ಅಡುಗೆ ವಿಷಯದಲ್ಲಿ ಅಷ್ಟೊಂದು ಅಪೇಕ್ಷಗಳಿಲ್ಲ. ಸರಳ, ತರಕಾರಿ ಹಾಕಿ ಮಾಡುವ ಸಾದಾ ಸೀದಾ ಅಡುಗೆಯನ್ನೇ ನೀಡುವಂತೆ ರಾಷ್ಟ್ರಪತಿ ಭವನದ ಬಾಣಸಿಗರಿಗೆ ಕಟ್ಟಪ್ಪಣೆಯಾಗಿದೆ ಎಂದು ಮೂಲಗಳು ಆಂಗ್ಲ ವಾಹಿನಿಯೊಂದರಲ್ಲಿ ಹೇಳಿವೆ.