ಪ್ರಧಾನಿ ಮೋದಿ- ಸೌದಿ ವಿದೇಶಾಂಗ ಸಚಿವರ ಭೇಟಿ ವೇಳೆ ಅಫ್ಘಾನಿಸ್ತಾನದ ಕುರಿತು ಮಹತ್ವದ ಚರ್ಚೆ
ಮಂಗಳವಾರ, 21 ಸೆಪ್ಟಂಬರ್ 2021 (11:30 IST)
ನವದೆಹಲಿ : ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಅಫ್ಘಾನಿಸ್ತಾನದ ಪರಿಸ್ಥಿತಿ ಸೇರಿದಂತೆ ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ರಕ್ಷಣಾ ವಲಯ, ವ್ಯಾಪಾರ, ಹೂಡಿಕೆ, ಇಂಧನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವ ದ್ವಿಪಕ್ಷೀಯ ಉಪಕ್ರಮಗಳ ಅಭಿವೃದ್ಧಿಯ ಬಗ್ಗೆ ಉಭಯ ನಾಯಕರೂ ಚರ್ಚೆ ನಡೆಸಿದ್ದಾರೆ.
ಮೋದಿ ಸೌದಿ ವಿದೇಶಾಂಗ ಸಚಿವರ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದು, "ಸೌದಿಯ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅವರನ್ನು ಸ್ವಾಗತಿಸುವುದಕ್ಕೆ ಸಂತೋಷವಾಗುತ್ತಿದೆ. ಈಗ ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರ ಕ್ರಮಗಳು, ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ" ಎಂದು ಹೇಳಿದ್ದಾರೆ.
ಇಂಧನ, ಐಟಿ, ರಕ್ಷಣಾ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೌದಿ ಅರೇಬಿಯಾದಿಂದ ಹೆಚ್ಚಿನ ಹೂಡಿಕೆಯನ್ನು ಭಾರತ ಎದುರುನೋಡುತ್ತಿರುವುದಾಗಿ ಮೋದಿ ಹೇಳಿದ್ದಾರೆ.
ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ವಿಶೇಷವಾದ ಚರ್ಚೆ ನಡೆದಿದೆ. ಕೋವಿಡ್-19 ಸಂದರ್ಭದಲ್ಲಿ ಸೌದಿ ಅರೇಬಿಯಾದಲ್ಲಿ ಭಾರತೀಯ ಸಮುದಾಯದ ಬಗ್ಗೆ ಕಾಳಜಿ ವಹಿಸಿದ್ದ ಅಲ್ಲಿನ ಆಡಳಿತಕ್ಕೆ ಮೋದಿ ವಿಶೇಷ ಧನ್ಯವಾದ ತಿಳಿಸಿದ್ದಾರೆ.