ರಾಹುಲ್ ಬದಲು ಪ್ರಿಯಾಂಕಾ ಅವರಿಗೆ ಪಕ್ಷದ ಜವಾಬ್ದಾರಿ ಹೊರಿಸುವಂತೆ ಕಾಂಗ್ರೆಸ್ ಪಕ್ಷದ ಒಳಗಡೆಯೇ ಆಗಾಗ ಒತ್ತಾಯಗಳು ಕೇಳಿ ಬರುತ್ತಿರುತ್ತದೆ. ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನೇ ಹೋಲುವುದು ಸಹ ಇದಕ್ಕೆ ಕಾರಣವಿರಬಹುದು. ಈಗ ಸ್ವತಃ ಇಂದಿರಾ ಗಾಂಧಿಯವರು ಸಹ ಇದೇ ಬಯಕೆಯನ್ನು ಹೊಂದಿದ್ದರು ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ. ಮೊಮ್ಮಗಳು ಪ್ರಿಯಾಂಕಾ ತಮ್ಮ ಉತ್ತರಾಧಿಕಾರಿಯಾಗಬೇಕೆಂದು ಬಯಸಿದ್ದರು ಎಂದು ಅವರ ವಿಶ್ವಸನೀಯ ಸಲಹೆಗಾರರಾಗಿದ್ದ ಹಿರಿಯ ಕಾಂಗ್ರೆಸಿಗ ಎಂ ಎಲ್ ಫೋತೆದಾರ್ ಹೇಳಿದ್ದಾರೆ.
ಇಂದಿರಾ ಗಾಂಧಿ ಹತ್ಯೆಯಾಗುವುದಕ್ಕೆ ಕೇವಲ ಮೂರು ದಿನಗಳ ಮೊದಲು. ಆಗ ನಾವು ಕಾಶ್ಮೀರದಲ್ಲಿದ್ದೆವು. ಅಲ್ಲಿ ದೇವಸ್ಥಾನವೊಂದನ್ನು ಸಂದರ್ಶಿಸಿ ದಿಲ್ಲಿಗೆ ಹೊರಡುವ ಮುನ್ನ ನಾವೆಲ್ಲ ಕೊಂಚ ಕಾಲ ಅಲ್ಲೇ ಕುಳಿತುಕೊಂಡು ವಿಶ್ರಾಂತಿ ಪಡೆದುಕೊಂಡೆವು. ಆಗಲೇ ಅವರು ನನ್ನ ಜತೆ ಪ್ರಿಯಾಂಕಾ ಬಗ್ಗೆ ಹೇಳಿಕೊಂಡಿದ್ದರು", ಎಂದು ಫೋತೆದಾರ್ ಹೇಳಿದ್ದಾರೆ.
"ಬಹುಶಃ ತಮ್ಮ ಸಾವು ಸನ್ನಿಹಿತವಾಗಿದೆ ಎಂದು ಅವರಿಗೆ ಅನ್ನಿಸಿರಬೇಕು, ಹೀಗಾಗಿ ಪ್ರಿಯಾಂಕಾ ನಾಯಕಿಯಾಗಬೇಕೆಂಬ ತಮ್ಮ ಬಯಕೆಯನ್ನು ಅವರು ಹೇಳಿಕೊಳ್ಳಲು ಬಯಸಿರಬೇಕು. ಅವರ ಮಾತುಗಳು ಬಹಳ ಮಹತ್ವದೆಂದು ನನಗನ್ನಿಸಿತು. ಅವರು ಹೇಳಿದ್ದನ್ನೆಲ್ಲ ಅಂದು ರಾತ್ರಿಯೇ ನಾನು ಬರೆದಿಟ್ಟಿದ್ದೆ", ಎಂದು ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.