ಉತ್ತರ ಪ್ರದೇಶಕ್ಕೆ ದತ್ತುಪುತ್ರನ ಅಗತ್ಯವಿಲ್ಲ

ಶನಿವಾರ, 18 ಫೆಬ್ರವರಿ 2017 (07:45 IST)
ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಚುನಾವಣಾ ಪ್ರಚಾರದ ಆಖಾಡಕ್ಕೆ ಧುಮುಕಿರುವ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶಕ್ಕೆ ದತ್ತುಪುತ್ರನ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.
ನಿನ್ನೆ ರಾಯ್ ಬರೇಲಿಯಲ್ಲಿ ಸಹೋದರ ರಾಹುಲ್ ಗಾಂಧಿ ಜತೆ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರಧಾನಿ ಮೋದಿಗೆ ತಿರುಗೇಟು ನೀಡಿದರು.ಉತ್ತರ ಪ್ರದೇಶ ನನ್ನನ್ನು ದತ್ತುಪುತ್ರನಾಗಿ ಸ್ವೀಕರಿಸಿದೆ ಎನ್ನುತ್ತಾರೆ ಮೋದಿ. ಆದರೆ ನಮ್ಮ ರಾಜ್ಯದ ಅಭಿವೃದ್ಧಿಗೆ ಹೊರಗಿನವರನ್ನು ದತ್ತು ತೆಗೆದುಕೊಳ್ಳುವ ಅಗತ್ಯವಿಲ್ಲ. ಅದಕ್ಕೆ ರಾಜ್ಯದವರೇ ಆದ ಅಖಿಲೇಶ್  ಯಾದವ್, ರಾಹುಲ್ ಗಾಂಧಿ ಇದ್ದಾರೆ ಎಂದರು.
 
ರಾಜ್ಯದ ಪ್ರತಿಯೊಬ್ಬ ಯುವಕ ನಾಯಕನಾಗಿ ಬೆಳೆದು ರಾಜ್ಯದ ಅಭಿವೃದ್ಧಿಗೆ ಶ್ರಮಿಸಬಲ್ಲ. ನಿಮಗಾಗಿ ಕೆಲಸ ಮಾಡುವವರಿಗೆ ಮತ ನೀಡಿ ಎಂದು ಪ್ರಿಯಾಂಕಾ ಕರೆ ನೀಡಿದರು.
 
ಕಳೆದ ಲೋಕಸಭಾ ಚುನಾವಣೆಯಲ್ಲಿ ಗಂಗಾಮಾತೆ ಮೇಲೆ ಪ್ರಮಾಣ ಮಾಡಿ ಭರವಸೆಗಳ ಪಟ್ಟಿ ಮುಂದಿಟ್ಟಿದ್ದ ಮೋದಿ, ಇಲ್ಲಿಯವರೆಗೆ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಸುಳ್ಳು ವಾಗ್ದಾನಗಳನ್ನು ಮಾಡುವ ವ್ಯಕ್ತಿಗೆ ಮತ ನೀಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ