ಇಂದು ಸಿಧು 'ಕೈ' ಹಿಡಿಯುವ ಸಾಧ್ಯತೆ

ಸೋಮವಾರ, 9 ಜನವರಿ 2017 (12:26 IST)
ಕ್ರಿಕೆಟಿಗ ಪರಿವರ್ತಿತ ರಾಜಕಾರಣಿ, ಭಾರತೀಯ ಜನತಾ ಪಕ್ಷದ ಮಾಜಿ ನಾಯಕ ನವಜೋತ್ ಸಿಧು ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಸಾಧ್ಯತೆಗಳಿವೆ. 
 
ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದ ಸಿಧು ವಿದೇಶ ಪ್ರವಾಸದಲ್ಲಿರುವ ರಾಹುಲ್ ಮರಳಿ ಬರುವುದನ್ನೇ ಕಾಯುತ್ತಿದ್ದಾರೆ. ಹೊಸ ವರ್ಷದ ಮುನ್ನಾ ದಿನ ರಾಹುಲ್ ವಿದೇಶಕ್ಕೆ ಹಾರಿದ್ದರು. 
 
ಚುನಾವಣೆ ಸಮೀಪಿಸುತ್ತಿದ್ದು ಪ್ರಚಾರವನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿರುವ ಪಂಜಾಬ್ ಕಾಂಗ್ರೆಸ್ ತಮ್ಮ ಪಕ್ಷದ ಉಪಾಧ್ಯಕ್ಷ ಹೊಸ ವರ್ಷದ ಪ್ರವಾಸವನ್ನು ಮುಗಿಸಿಕೊಂಡು ಹಿಂತಿರುಗುವುದನ್ನೇ ಕಾಯುತ್ತಿದ್ದಾರೆ. 
 
ಪಂಜಾಬ್ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಕಾಂಗ್ರೆಸ್ ಜನವರಿ 10 ರಂದು ಸಭೆ ಸೇರಲಿದ್ದು, ಉಳಿದ 40 ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅಂದು ಘೋಷಿಸಲಾಗುವುದು.
 
ಪಕ್ಷದ ವರಿಷ್ಠರ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಸಿಧು ಮತ್ತು ಅವರ ಪತ್ನಿ ಬಿಜೆಪಿಯನ್ನು ತ್ಯಜಿಸಿದ್ದರು.
 
2004 ಮತ್ತು 2014 ನಡುವೆ ಲೋಕಸಭೆಯಲ್ಲಿ ಅಮೃತಸರವನ್ನು ಪ್ರತಿನಿಧಿಸಿದ್ದ ಸಿಧು, ಬಿಜೆಪಿ ತಮ್ಮನ್ನು ಪಂಜಾಬ್‌ನಿಂದ ಹೊರಗಿಡಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದರು. ಜತೆಗೆ ತಮ್ಮನ್ನು 'ಅಲಂಕಾರಿಕ ಕೃತಿ'ಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದರು.
 
ಬಿಜೆಪಿ ತ್ಯಜಿಸಿದ ಬಳಿಕ ಕೇಜ್ರಿವಾಲ್ ನೇತೃತ್ವದ ಆಪ್ ಸೇರಲೆತ್ನಿಸಿದ್ದ ಅವರು, ಬಳಿಕ ‘ಆವಾಜ್ ಇ ಪಂಜಾಬ್’ ಪಕ್ಷವನ್ನು ಸ್ಥಾಪಿಸಿದ್ದರು. 
 
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಮುಂದಿನ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸಿಧು ನೇತೃತ್ವದ ‘ಆವಾಜ್ ಇ ಪಂಜಾಬ್’ ಸ್ಪರ್ಧಿಸಬೇಕಿತ್ತು. ಆದರೆ, ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಿದರೆ, ಆಡಳಿತ ವಿರೋಧಿ ಮತಗಳನ್ನು ವಿಭಜಿಸಿದಂತಾಗುತ್ತದೆ ಎಂಬ ಕಾರಣ ನೀಡಿರುವ ಸಿಧು, ಚುನಾವಣೆಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದರು. 
 
ಬಳಿಕ ಕಾಂಗ್ರೆಸ್ ಸೇರುವ ಇಂಗಿತವನ್ನು ವ್ಯಕ್ತ ಪಡಿಸಿದ್ದ ಸಿಧು ಅನರರ ಪತ್ನಿ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮತ್ತೀಗ ಸಿಧು ಸಹ ಅಧಿಕೃತವಾಗಿ ಪಕ್ಷವನ್ನು ಸೇರಲಿದ್ದಾರೆ. 
 
ಸದ್ಯದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸಿಧು ಅಮೃತಸರ್ ಪೂರ್ವದಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಪತ್ನಿ ನವಜೋತ್ ಕೌರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ