ಪೊಲೀಸ್ ಮೂಲಗಳ ಪ್ರಕಾರ, ಯುವತಿಯ ಗುಪ್ತಾಂಗದಿಂದ ರಕ್ತ ಹರಿಯುತ್ತಿದ್ದರೂ ಕುಟುಂಬದವರು ಮರ್ಯಾದೆಗೆ ಹೆದರಿ ಪೊಲೀಸ್ ಠಾಣೆಗೆ ದೂರೂ ನೀಡಲಿಲ್ಲ. ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡಾ ಕೊಡಿಸದಿರುವುದು ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಸರಕಾರಿ ಕಾಲೇಜಿನಲ್ಲಿ ಪಿಯುಸಿ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜಿಗೆ ತೆರಳುತ್ತಿರುವ ಸಂದರ್ಭದಲ್ಲಿ ಕಾಮುಕರು ಆಕೆಯನ್ನು ಅಪಹರಿಸಿ ಗ್ಯಾಂಗ್‌ರೇಪ್ ಎಸಗಿ ಅರಣ್ಯ ಪ್ರದೇಶದೊಳಗೆ ಬಿಸಾಕಿ ಪರಾರಿಯಾಗಿದ್ದರು. ನಂತರ ಆಕೆಯ ಕುಟುಂಬದವರು ಪತ್ತೆ ಹಚ್ಚಿ ಮನೆಗೆ ಕರೆದುಕೊಂಡು ಹೋಗಿದ್ದರು. ಯುವತಿಯ ಸ್ಥಿತಿಯ ಬಗ್ಗೆ ಗ್ರಾಮಸ್ಥನೊಬ್ಬನು ನಮಗೆ ಮಾಹಿತಿ ನೀಡಿದ್ದರಿಂದ ಅವರ ಮನೆಗೆ ಭೇಟಿ ನೀಡಲಾಗಿತ್ತು. ಆದರೆ, ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು ಎಂದು ಜಲಾಲಾಬಾದ್ ಡಿವೈಎಸ್‌ಪಿ ಅಮರ್‌ಜಿತ್ ಸಿಂಗ್ ತಿಳಿಸಿದ್ದಾರೆ.
ಯುವತಿಗೆ ಕೂಡಲೇ ಚಿಕಿತ್ಸೆಯ ಅಗತ್ಯವಿತ್ತು. ಆದರೆ, ಪುತ್ರಿಯ ಮೇಲಿನ ಅತ್ಯಾಚಾರವನ್ನು ಕುಟುಂಬದ ಸದಸ್ಯರು ಮರ್ಯಾದೆ ವಿಷಯವಾಗಿ ಪರಿಗಣಿಸಿ ಆಸ್ಪತ್ರೆಗೆ ದಾಖಲಿಸದಿದ್ದರಿಂದ ಸಾವನ್ನಪ್ಪಿದ್ದಾಳೆ. ಮೂವರು ಕಾಮುಕರನ್ನು ಇಲ್ಲಿಯವರೆಗೆ ಬಂಧಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ಯುವತಿಯ ಸಹಪಾಠಿಯಾಗಿದ್ದ ಆರೋಪಿಯನ್ನು ಆಕೆಯ ತಾಯಿ ಗುರುತಿಸಿದ್ದಾಳೆ. ಒಟ್ಟು ಮೂವರು ಅಪ್ರಾಪ್ತರು ಅತ್ಯಾಚಾರವೆಸಗಿರುವ ಸಾಧ್ಯತೆಗಳಿವೆ. ಅಪರಿಚಿತ ಆರೋಪಿಗಳ ವಿರುದ್ಧ ಅತ್ಯಾಚಾರ, ಹತ್ಯೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮರ್‌ಜಿತ್ ಸಿಂಗ್ ತಿಳಿಸಿದ್ದಾರೆ.