ಆತ್ಮಹತ್ಯೆ ಮಾಡಿಕೊಂಡ ಯೋಧನ ಅಂತ್ಯ ಸಂಸ್ಕಾರಕ್ಕೆ ರಾಹುಲ್, ಕೇಜ್ರಿವಾಲ್

ಗುರುವಾರ, 3 ನವೆಂಬರ್ 2016 (12:19 IST)
ಒಆರ್‌ಒಪಿ ಜಾರಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಆತ್ಮಹತ್ಯೆಗೆ ಶರಣಾದ ರಾಮ್ ಕಿಶನ್ ಗರೇವಾಲ್ ಅವರ ಅಂತ್ಯಕ್ರಿಯೆ ಇಂದು ಅವರ ತವರು ಭಿವಾನಿಯಲ್ಲಿ ನಡೆಯುತ್ತಿದೆ. ತತ್ ನಿಮಿತ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಭಿವಾನಿಯ ಭಾಮ್ಲಾ ಗ್ರಾಮಕ್ಕೆ ಆಗಮಿಸಿದ್ದು ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹ ಕೆಲವೇ ಸಮಯದಲ್ಲಿ ಅಲ್ಲಿಗೆ ತಲುಪಲಿದ್ದಾರೆ. 
ಮೃತ ಕುಟುಂಬಸ್ಥರನ್ನು ಭೇಟಿಯಾದ ರಾಹುಲ್ ಗಾಂಧಿ ಅವರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದಾರೆ.
 
'ಏಕ ಶ್ರೇಣಿ, ಏಕ ಪಿಂಚಣಿ' ಯೋಜನೆ ಜಾರಿಗೆ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ರಾಮ್ ಕಿಶನ್ ಗರೇವಾಲ್ ನಿನ್ನೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಮತ್ತೀಗ ಇದು ರಾಜಕೀಯ ಬಣ್ಣ ಪಡೆದುಕೊಳ್ಳುಕ್ಕಿದ್ದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಕೆಸರೆರೆಚಾಟ ಮೀತಿ ಮೀರಿದೆ. 
 
ನಿನ್ನೆ ಯೋಧನ ಶವವನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿಟ್ಟ ಸಂದರ್ಭದಲ್ಲಿ ರಾಹುಲ್ ಗಾಂಧಿ, ಕೇಜ್ರಿವಾಲ್ ಮತ್ತು ಇತರ ನಾಯಕರನ್ನು ಪೊಲೀಸರು ತಡೆದಿದ್ದರು. ಇದರಿದ್ದ ಕೆರಳಿದ್ದ ರಾಹುಲ್ ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧ, ಯೋಧನ ಸಾವಿಗೆ ಕೇಂದ್ರ ಸರ್ಕಾರದ ನಿರ್ಲಕ್ಷವೇ ಕಾರಣ ಎಂದು ರಾಹುಲ್ ಕಿಡಿಕಾರಿದ್ದರು.
 
ಇನ್ನು ಆಮ್ ಆದ್ಮಿ ಪಕ್ಷ ಕೂಡ ಕೇಂದ್ರದ ವಿರುದ್ಧ ಆಖಾಡಕ್ಕಿಳಿದಿದ್ದು, ನಿನ್ನೆ ಆಸ್ಪತ್ರೆ ಪ್ರವೇಶಿಸಲು ಯತ್ನಿಸಿದ್ದ ಕೇಜ್ರಿವಾಲ್ ಅವರನ್ನು ಸಹ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದರು. ಯೋಧನ ಆತ್ಮಹತ್ಯೆಗೆ ಕೇಂದ್ರ ಸರ್ಕಾರವೇ ಜವಾಬ್ದಾರ ಎಂದು ಕಿಡಿಕಾರಿದ ಕೇಜ್ರಿವಾಲ್, ಏಕ ಶ್ರೇಣಿ, ಏಕ ಪಿಂಚಣಿ' ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಮೋದಿ ಸುಳ್ಳು ಹೇಳುತ್ತಾರೆ. ಕೇಂದ್ರ ಕೊಟ್ಟ ಮಾತಿನಂತೆ ನಡೆದಿದ್ದರೆ ರಾಮ್ ಕಿಶನ್ ಗರ್ಹವಾಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಆರೋಪಿಸಿದ್ದರು. 
 
ನಮ್ಮ ಸೈನಿಕರು ಗಡಿಯಲ್ಲಿ ಬಾಹ್ಯ ಶತ್ರುಗಳ ಜತೆಯಲ್ಲಿ ಹೋರಾಡುವುದಲ್ಲದೆ, ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಆಂತರಿಕವಾಗಿ ಸಹ ಹೋರಾಡಬೇಕಾಗಿದೆ ಎಂಬುದು ಬಹಳ ಖೇದಕರ ವಿಚಾರ ಎಂದಿದ್ದ ಕೇಜ್ರಿವಾಲ್, ಸಂಪೂರ್ಣ ದೇಶ ಯೋಧರ ಹಕ್ಕುಗಳ ಪರವಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ ದೆಹಲಿ ಸಿಎಂ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ