ಹೊಸ ವರ್ಷದ ರಜಾ ಮುಗಿಸಿ ವಾಪಸ್ಸಾದ ರಾಹುಲ್ ಗಾಂಧಿ

ಮಂಗಳವಾರ, 10 ಜನವರಿ 2017 (13:50 IST)
ಹೊಸ ವರ್ಷವನ್ನಾಚರಿಸಲು ವಿದೇಶಕ್ಕೆ ತೆರಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ದೇಶಕ್ಕೆ ಮರಳಿದ್ದಾರೆ.

ಹೊಸ ವರ್ಷದ ಮುನ್ನಾದಿನದಂದು ಟ್ವಿಟರ್‌ನಲ್ಲಿ ದೇಶವಾಸಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದ ರಾಹುಲ್, ನವ ವರ್ಷ ನಿಮಗೆ ಸಂತೋಷ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸಿದ್ದರು ಮತ್ತು ತಾವು ಇಂದು ವಿದೇಶಕ್ಕೆ ತೆರಳುತ್ತಿದ್ದು ಜನವರಿ 4ಕ್ಕೆ ವಾಪಸ್ಸಾಗುತ್ತಿರುವುದಾಗಿ ಹೇಳಿದ್ದರು. ಆದರೆ ಬರೊಬ್ಬರಿ 10 ದಿನಗಳ ಬಳಿಕ ಅವರು ವಾಪಸ್ಸಾಗಿದ್ದಾರೆ. 
 
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಮೈತ್ರಿಯ ಉದ್ದೇಶದಿಂದ ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ಅವರ ಜತೆ ರಾಹುಲ್ ಇಂದು ಮಾತುಕತೆ ನಡೆಸುವ ಸಾಧ್ಯತೆಗಳಿವೆ.
 
ನೋಟು ಅಮೌಲ್ಯೀಕರಣದ ವಿರುದ್ಧ ಸಂಸತ್ತಿನ ಒಳಗೆ ಮತ್ತು ಹೊರಗೆ ತೀವ್ರ ಪ್ರತಿಭಟನೆ ನಡೆಸಿದ್ದ ರಾಹುಲ್ ಕೇವಲ ಒಂದು ಬಾರಿ ಸರತಿ ಸಾಲಲ್ಲಿ ನಿಂತು ಹಣ ಪಡೆದಿದ್ದರು. ಆದರೆ ಬಳಿಕ ಮತ್ತೆಂದೂ ಹಣ ಪಡೆಯಲು ಬ್ಯಾಂಕ್ ಕಡೆ ಸುಳಿಯಲೇ ಇಲ್ಲ ಎಂದು ಬಿಜೆಪಿ ಲೇವಡಿ ಮಾಡಿತ್ತು.
 
ಕಳೆದ ಬಾರಿ ಸಹ ಹೊಸ ವರ್ಷದ ಸಂದರ್ಭದಲ್ಲಿ ಕೂಡ ಅವರು ದೇಶದಲ್ಲಿರಲಿಲ್ಲ. ಅವರು ಎಲ್ಲಿಗೆ ಹೋಗಿದ್ದರೆಂಬುದು ಗುಟ್ಟಾಗಿಯೇ ಇತ್ತು. ವಿರೋಧ ಪಕ್ಷದ ನಾಯಕರಂತ ಜವಾಬ್ದಾರಿ ಸ್ಥಾನದಲ್ಲಿರುವವರು 30 ರಿಂದ 40 ದಿನಗಳ ಕಾಲ ಪತ್ತೆ ಇಲ್ಲದಿದ್ದುದು ದೇಶದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ