ರಾಹುಲ್‌ ಗಾಂಧಿ ಇ.ಡಿ. ವಿಚಾರಣೆ?

ಸೋಮವಾರ, 13 ಜೂನ್ 2022 (12:05 IST)
ನವದೆಹಲಿ : ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜಾರಿ ನಿರ್ದೇಶನಾಲಯ (ಇ.ಡಿ.) ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಹೀಗಿರುವಾಗ ಇತ್ತ ಕಾಂಗ್ರೆಸ್ ಪಕ್ಷವು ರಾಹುಲ್ ವಿಚಾರಣೆಯನ್ನು ಖಂಡಿಸಿ ದಿಲ್ಲಿಯ ಇ.ಡಿ. ಮುಖ್ಯ ಕಚೇರಿ ಹಾಗೂ ದೇಶದ ವಿವಿಧ 25 ಇ.ಡಿ. ಕಚೇರಿಗಳ ಮುಂದೆ ಬಲಪ್ರದರ್ಶನ ಆರಂಭಿಸಿದೆ

ಕೇಂದ್ರವು ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಗಾಂಧಿಗಳ ವಿರುದ್ಧ ಇ.ಡಿ.ಯನ್ನು ಛೂ ಬಿಟ್ಟಿದೆ ಎಂಬುದು ಕಾಂಗ್ರೆಸ್ಸಿಗರ ಆರೋಪ. ಅದಕ್ಕೆಂದೇ ಕಾಂಗ್ರೆಸ್ ಪಕ್ಷದ ಎಲ್ಲಾ ರಾಜ್ಯಸಭಾ ಮತ್ತು ಲೋಕಸಭಾ ಸಂಸದರು, ಹಿರಿಯ ನಾಯಕರಿಗೆ ಸೋಮವಾರ ಮುಂಜಾನೆ ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಕೇಂದ್ರ ಕಚೇರಿಗೆ ಬರುವಂತೆ ಸೂಚಿಸಲಾಗಿದೆ.

ಅಲ್ಲಿಂದ ರಾಹುಲ್ ಗಾಂಧಿ ಅವರ ಜತೆಗೇ ಮೆರವಣಿಗೆ ಹೊರಡಲಿರುವ ನಾಯಕರು, ಅಬ್ದುಲ್ ಕಲಾಂ ರಸ್ತೆಯ ಇ.ಡಿ. ಕಚೇರಿಗೆ ತೆರಳಲಿದ್ದಾರೆ. ರಾಹುಲ್ ಗಾಂಧಿ ವಿಚಾರಣೆಗೆ ಒಳಹೋದ ವೇಳೆ ಹೊರಗೆ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ.

ಇದೇ ವೇಳೆ, ದೇಶದ ವಿವಿಧ ಭಾಗಗಳಲ್ಲಿ ಇರುವ 25 ಇ.ಡಿ. ಕಚೇರಿಗಳ ಮುಂದೆ ಪ್ರದೇಶ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಾಣಿಕ್ಯಂ ಟ್ಯಾಗೋರ್ ಹೇಳಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸಿಬಿಐ ಹಾಗೂ ಇ.ಡಿ.ಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇದೇ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರಿಗೆ ಜೂ.23ರಂದು ಹಾಜರಾಗಲು ಇ.ಡಿ. ಸಮನ್ಸ್ ಜಾರಿ ಮಾಡಿದೆ. ರಾಹುಲ್ ಗಾಂಧಿ ಅವರಿಗೆ ಜೂ.2ರಂದೇ ಇ.ಡಿ. ಬುಲಾವ್ ನೀಡಿತ್ತು. ಆದರೆ ಅವರು ವಿದೇಶದಲ್ಲಿದ್ದ ಕಾರಣ ಮತ್ತೆ ವಿಚಾರಣಾ ದಿನಾಂಕ ಜೂ.13ಕ್ಕೆ ನಿಗದಿಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ