ಸಮಾಜವಾದಿ ಪಕ್ಷ ಒಡೆದರೆ ಅಖಿಲೇಶ್ ಜತೆ ರಾಹುಲ್ ಮೈತ್ರಿ?

ಗುರುವಾರ, 27 ಅಕ್ಟೋಬರ್ 2016 (16:20 IST)
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಯಾದವೀ ಕಲಹದ ಲಾಭ ಪಡೆಯಲು ಕಾಂಗ್ರೆಸ್ ಪಕ್ಷ ಕಾದು ಕುಳಿತಿರುವಂತಿದೆ. ಸಮಾಜವಾದಿ ಪಕ್ಷದಲ್ಲಿ ಎದ್ದಿರುವ ಗೊಂದಲಗಳ ಮೇಲೆ ನಿಗಾ ಇಟ್ಟಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒಂದು ವೇಳೆ ಪಕ್ಷ ಇಬ್ಭಾಗವಾದರೆ ಅಖಿಲೇಶ್ ಜತೆ ಮೈತ್ರಿ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. 
ಸ್ವತಃ ಕಾಂಗ್ರೆಸ್ ಮೂಲಗಳಿಂದ ಹರಿದು ಬಂದಿರುವ ಸುದ್ದಿಯ ಪ್ರಕಾರ ಅಖಿಲೇಶ್ ಜತೆಗೆ ಉತ್ತಮ ಸಂಬಂದವನ್ನು ಹೊಂದಿರುವ ರಾಹುಲ್, ಸಮಾಜವಾದಿ ಪಕ್ಷ ಒಡೆದರೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಒಲವು ಹೊಂದಿದ್ದಾರೆ. 
 
ಆದಾಗ್ಯೂ, ಮತ್ತೊಬ್ಬ  ಕಾಂಗ್ರೆಸ್ ನಾಯಕ, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದು "ಯೋಜಿತ ನಾಟಕ" ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಇದಕ್ಕೆ ಜವಾಬ್ದಾರರು ಎಂದು ವ್ಯಾಖ್ಯಾನಿಸಿದ್ದಾರೆ. 
 
ಸಂಪೂರ್ಣ ನಾಟಕದ ನಿರ್ಮಾಣ, ನಿರ್ದೇಶನ ಮತ್ತು ನಟನೆ ಮುಲಾಯಂ ಸಿಂಗ್ ಅವರದ್ದು ಎಂದವರು ಹೇಳಿದ್ದಾರೆ. 
 
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಎರಡು ಬಣಗಳಾಗಿ ಒಡೆದಿದೆ. ಮುಲಾಯಂ ಸಹೋದರ ಶಿವಪಾಲ್ ಸಿಂಗ್ ಅವರದು ಒಂದು ಬಣವಾದರೆ, ಪುತ್ರ ಅಖಿಲೇಶ್ ಯಾದವ್ ಅವರದು ಇನ್ನೊಂದು ಬಣ. ಪಕ್ಷದಲ್ಲಿ ಎದ್ದಿರುವ ಗೊಂದಲವನ್ನು ಸರಿ ಪಡಿಸಲು ಶತಾಯಗತಾಯ ಯತ್ನಿಸುತ್ತಿರುವ ಮುಲಾಯಂ ಸಿಂಗ್ ಯಾದವ್ ತಮ್ಮ ತಮ್ಮ ಶಿವಪಾಲ್ ಸಿಂಗ್ ಮತ್ತು ಮಿತ್ರ ಅಮರ್ ಸಿಂಗ್ ಪರ ನಿಂತಿದ್ದಾರೆ. 
 

ವೆಬ್ದುನಿಯಾವನ್ನು ಓದಿ