ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ್ದ ಭೀಕರ ಗುಡ್ಡ ಕುಸಿತ ದರುಂತ ದೇಶವೇ ತಲ್ಲಣಗೊಳಿಸುವಂತೆ ಮಾಡಿತ್ತು. ಮೊನ್ನೆಯಷ್ಟೇ ಅಲ್ಲಿನ ಸಂಸದ ರಾಹುಲ್ ಗಾಂಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕ ಜೊತೆ ವಯನಾಡಿನ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ರೈನ್ ಕೋಟ್, ಗಮ್ ಬೂಟ್ ಹಾಕಿಕೊಂಡು ದುರಂತ ಸ್ಥಳವನ್ನು ವೀಕ್ಷಿಸಿದ್ದರು. ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ಕಡೆ ರಾಹುಲ್ ಕೆಸರು ಇದೆ ಎಂಬ ಕಾರಣಕ್ಕೆ ಕಾರಿನಿಂದ ಇಳಿಯಲು ನಿರಾಕರಿಸುತ್ತಾರೆ.
ಆಗ ಸ್ಥಳದಲ್ಲಿದ್ದ ಸ್ಥಳೀಯ ಯುವಕನೊಬ್ಬ ಕಾರಿನಿಂದ ಕೆಳಗಿಳಿಯುವಂತೆ ಆಗ್ರಹಿಸುತ್ತಾನೆ. ಆದರೆ ರಾಹುಲ್ ಇದಕ್ಕೆ ಕಿವಿಯೇ ಕೊಡದೆ ಕಾರಿನಲ್ಲೇ ಕೂತಿರುತ್ತಾರೆ. ಅವರ ಚಾಲಕ ಯವಕನೆಡೆ ಕೈ ತೋರಿಸಿ ಮುಂದೆ ನಡೆಯವಂತೆ ಸೂಚಿಸುತ್ತಾರೆ. ಈ ಮಧ್ಯೆ ಪೊಲೀಸರು ಯುವಕನನ್ನು ಇತ್ತ ಕರೆದೊಯ್ದು ಸಮಾಧಾನಿಸುವ ಪ್ರಯತ್ನ ಮಾಡುತ್ತಾರೆ.
ಆಗ ಕೆಲವು ಸ್ಥಳೀಯರೂ ಯುವಕನಿಗೆ ಸಾಥ್ ನೀಡುತ್ತಾರೆ. ಈ ವೇಳೆ ಯುವಕ ನಮ್ಮ ಕಷ್ಟ ಕೇಳಲು ಇಲ್ಲಿಗೆ ಬಂದು ಕೆಳಗಿಳಿಯಲ್ಲ ಎಂದರೆ ಇಲ್ಲಿನ ಸಂಸದರಾಗಿದ್ದು ಯಾಕೆ? ನಮ್ಮ ಸಮಸ್ಯೆಗಳನ್ನು ನೋಡಲು ಅವರು ಕೆಳಗಿಳಿದು ಬರಬೇಕಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಹಾಗಿದ್ದರೂ ರಾಹುಲ್ ಇದಕ್ಕೆ ತಲೆಯೇ ಕೆಡಿಸಿಕೊಳ್ಳದೇ ಮುಂದೆ ಸಾಗುತ್ತಾರೆ.