ನವದೆಹಲಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಮೌನವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯ ಬಗ್ಗೆ ಪ್ರಧಾನಿ ಮೋದಿ ಎಂದಿನಂತೆ ಮೌನವಹಿಸಿದ್ದಾರೆ. ಇದೀಗ ಪ್ರಧಾನಿ ಮೋದಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡಲೇಬೇಕಾಗಿದೆ.
ಎಲ್ಲವೂ ಗೊತ್ತಿದ್ದರೂ ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿಯ ಪರವಾಗಿ ಮೋದಿಜೀ ಕೇವಲ ಮತ ಗಳಿಸುವ ಉದ್ದೇಶದಿಂದ ಯಾಕೆ ಪ್ರಚಾರ ಮಾಡಿದರು?
ಅಂತಹ ದೊಡ್ಡ ಕ್ರಿಮಿನಲ್ ದೇಶದಿಂದ ಅಷ್ಟು ಸುಲಭವಾಗಿ ಓಡಿ ಹೋಗಲು ಸಾಧ‍್ಯವಾಗಿದ್ದು ಹೇಗೆ?
ಕೇಸರ್ ಗಂಜ್ ನಿಂದ ಕರ್ನಾಟಕದವರೆಗೆ ಮತ್ತು ಉನ್ನಾವೊದಿಂದ ಉತ್ತರಖಂಡ್ ವರೆಗೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿಗಳಿಗೆ ಪ್ರಧಾನಿ ಮೋದಿ ಮೌನವಾ ವಹಿಸುವ ಮೂಲಕ ಕ್ರಿಮಿನಲ್ ಗಳಿಗೆ ಬೆಂಬಲ ನೀಡುತ್ತಿದ್ದಾರೆ.
ಮೋದಿಯ ರಾಜಕೀಯ ಪರಿವಾರ ಸೇರಿಕೊಂಡರೆ ಕ್ರಿಮಿನಲ್ ಗಳಿಗೂ ರಕ್ಷಣೆ ಸಿಗುತ್ತದೆಯೇ?
ಎಂಬುದಾಗಿ ರಾಹುಲ್ ಗಾಂಧಿ ಟ್ವೀಟ್ ಮಾಡಿ ಮೋದಿಗೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ. ಇದೇ ವಿಚಾರವಾಗಿ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದರೂ ಯಾಕೆ ಆರೋಪಿ ಪ್ರಜ್ವಲ್ ನನ್ನು ಬಂಧಿಸಿಲ್ಲ ಎಂದು ಬಿಜೆಪಿ ಪ್ರಶ್ನಿಸುತ್ತಿದೆ.