ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಕ್ಕೊಳಗಾಗಿರುವ ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಬಂಧನ ತಡವಾಗಿರುವುದು ಯಾಕೆ ಎಂದು ಗೃಹಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣ ಬಯಲಿಗೆ ಬರುತ್ತಿದ್ದಂತೇ ಅವರು ಜರ್ಮನಿಗೆ ತೆರಳಿದ್ದಾರೆ. ಅವರ ಬಂಧನ ಕುರಿತಂತೆ ಬಿಜೆಪಿ-ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಕೇಂದ್ರ ಸರ್ಕಾರ ಪ್ರಜ್ವಲ್ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದೆ ಎಂದು ಕಾಂಗ್ರಸ್ ಆರೋಪಿಸಿದರೆ ಇತ್ತ ಬಿಜೆಪಿ ಅವರ ಮೇಲೆ ಆರೋಪ ಬಂದರೂ ಬಂಧನ ಮಾಡಿಲ್ಲವೇಕೆ ಎಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ಇದೀಗ ಅವರ ಬಂಧನ ತಡವಾಗುತ್ತಿರುವ ಬಗ್ಗೆ ಮಾಧ‍್ಯಮಗಳು ಪ್ರಶ್ನೆ ಮಾಡಿದಾಗ ಪ್ರತಿಕ್ರಿಯಿಸಿರುವ ಗೃಹಸಚಿವ ಜಿ ಪರಮೇಶ್ವರ್, ನಿಯಮದ ಪ್ರಕಾರ ಅಪರಾಧಿಗಳು 24 ಗಂಟೆಯೊಳಗೆ ಬಂದು ಶರಣಾಗಬೇಕು. ಆದರೆ ಅದರಲ್ಲಿ ವಿಫಲರಾದರೆ ಎಸ್ಐಟಿ ತಂಡ ಮುಂದಿನ ಕ್ರಮ ಕೈಗೊಳ್ಳಲಿದೆ. ನಾವು ಈಗಾಗಲೇ ಎಸ್ಐಟಿ ರಚನೆ ಮಾಡಿದ್ದು, ಅದು ಪ್ರಕರಣದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಿದೆ. ಯಾರನ್ನೇ ಆದರೂ ಏಕಾಏಕಿ ಬಂಧಿಸಲು ಸಾಧ‍್ಯವಿಲ್ಲ. ಅದಕ್ಕೆ ಪುರಾವೆಗಳು, ದೂರಿನಲ್ಲಿ ಏನು ಹೇಳಲಾಗಿದೆ, ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ಬರುತ್ತದೆ, ಅದರಲ್ಲಿ ಬಂಧಿಸಲು ಅವಕಾಶವಿದೆಯೇ ಎಂಬುದು ಮುಖ್ಯವಾಗುತ್ತದೆ.
ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ನಾವು ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಲು ಸಾಧ‍್ಯವೋ ಅದನ್ನು ಮಾಡುತ್ತಿದ್ದೇವೆ. ಇಷ್ಟ ಬಂದ ಹಾಗೆ ತನಿಖೆ ಮಾಡಲು ಸಾಧ‍್ಯವಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.