ಮೋದಿ ಆಡಳಿತದಲ್ಲಿ ದೇಶ ಸುರಕ್ಷಿತ: ರಾಜನಾಥ್ ಸಿಂಗ್ ಹೇಳಿಕೆ

ಶುಕ್ರವಾರ, 3 ಸೆಪ್ಟಂಬರ್ 2021 (10:00 IST)
ನವದೆಹಲಿ : ಇಡೀ ದೇಶವೇ ಬೆಚ್ಚಿಬೀಳುವಂತಹ ದೊಡ್ಡ ಮಟ್ಟದ ಉಗ್ರ ದಾಳಿಗಳು ಕಳೆದ ಏಳು ವರ್ಷಗಳಲ್ಲಿ ಒಂದೂ ಕೂಡ ಆಗಿಲ್ಲ. ಆ ಮಟ್ಟಿಗೆ ದೇಶವು ಸುರಕ್ಷಿತವಾಗಿದೆ. ಹಲವು ಕಡೆಗಳಲ್ಲಿ ಉಗ್ರರ ದಾಳಿ ಸಂಚನ್ನು ಮುಂಚಿತವಾಗಿಯೇ ವಿಫಲಗೊಳಿಸಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

ಗುಜರಾತಿನಲ್ಲಿ ಮೂರು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. "ಜಮ್ಮು-ಕಾಶ್ಮೀರದಲ್ಲಿನ ಕಾರ್ಯಾಚರಣೆಗಳನ್ನು ಬದಿಗೊತ್ತಿ ನೋಡಿದರೆ ದೇಶದ ಯಾವುದೇ ಮೂಲೆಯಲ್ಲೂ ಕೂಡ ಉಗ್ರರಿಗೆ ಬಾಲಬಿಚ್ಚಲು ಮೋದಿ ಅವಕಾಶವನ್ನೇ ಕೊಟ್ಟಿಲ್ಲ. ಇದು ಸಣ್ಣ ವಿಷಯವಲ್ಲ. ಅದೇ ಕಾಂಗ್ರೆಸ್ ಆಡಳಿತದಲ್ಲಿ ಯೋಧರ ಶೌರ್ಯವನ್ನು ಕೂಡ ಕಡೆಗಣಿಸಿ, ಅವರಿಗೆ ದಕ್ಕಬೇಕಾದ ʼಒನ್ ರ್ಯಾಂಕ್ ಒನ್ ಪೆನ್ಷನ್ʼ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿರಲಿಲ್ಲ" ಎಂದು ಸಿಂಗ್ ಟೀಕಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ಹೆಸರನ್ನೇ ಬಂಡವಾಳ ಮಾಡಿಕೊಂಡ ಕಾಂಗ್ರೆಸ್, ಯಾವತ್ತೂ ಕೂಡ ಗಾಂಧಿ ಅವರ ಮಾರ್ಗದಲ್ಲಿ ನಡೆದಿಲ್ಲ. ಆದರೆ ಬಿಜೆಪಿಯು ರಾಮ ಮಂದಿರ ನಿರ್ಮಾಣದಂತಹ ಸಾಂಸ್ಕೃತಿಕ ಭರವಸೆಯಿಂದ ಹಿಡಿದು ಎಲ್ಲ ಭರವಸೆಗಳನ್ನು ಜನರಿಗೆ ಪೂರೈಸಿಕೊಟ್ಟಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಗುಜರಾತ್ ಸಿಎಂ ವಿಜಯ್ ರೂಪಾನಿ ಅವರು, 2022ರ ಮಾ.10 ರಿಂದ ನಾಲ್ಕು ದಿನಗಳ ಕಾಲ ಡಿಫೆನ್ಸ್ ಎಕ್ಸ್ಫೋವನ್ನು ಗಾಂಧಿನಗರದಲ್ಲಿ ಆಯೋಜಿಸಲಾಗುವುದು ಎಂದು ಘೋಷಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ