ಸರ್ವಪಕ್ಷಗಳ ನಿಯೋಗದ ಜತೆ ಹುರಿಯತ್ ಮುಖಂಡರು ಮಾತುಕತೆ ನಿರಾಕರಿಸಿದ ಬಳಿಕ , ಗೃಹಸಚಿವ ರಾಜನಾಥ್ ಸಿಂಗ್ ಪ್ರತ್ಯೇಕತಾವಾದಿಗಳ ವರ್ತನೆಯಿಂದ ಅವರಿಗೆ ಕಾಶ್ಮೀರಿಯತ್, ಇನ್‌ಸಾನಿಯತ್ ಮತ್ತು ಜಮೂರಿಯತ್‌ನಲ್ಲಿ ನಂಬಿಕೆಯಿಲ್ಲವೆಂದು ತೋರಿಸುತ್ತದೆಂದು ಹೇಳಿದರು.
ನಿಯೋಗದ ಭೇಟಿಯ ಎರಡನೇ ದಿನ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಂಗ್, ಸರ್ವಪಕ್ಷಗಳ ಸದಸ್ಯರು ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸುವ 30 ನಿಯೋಗಗಳ ಜತೆ ಸಂವಾದ ನಡೆಸಿದ್ದು, ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಯಾಗುತ್ತದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾತುಕತೆಗೆ ಸಂಬಂಧಿಸಿದಂತೆ ,ಶಾಂತಿ ಮತ್ತು ಸಹಜಸ್ಥಿತಿ ಬಯಸುವ ಪ್ರತಿಯೊಬ್ಬರಿಗೂ ನಮ್ಮ ಬಾಗಿಲುಗಳು ತೆರೆದಿರುತ್ತವೆಂದು ತಿಳಿಸಿದರು. ಆದರೆ ನಮ್ಮ ಸ್ನೇಹಿತರು ಹಿಂತಿರುಗಿದಾಗ ನೀಡಿದ ಮಾಹಿತಿ ಕಾಶ್ಮೀರಿಯತ್ ಆಗಿರಲಿಲ್ಲ. ಇದನ್ನು ಇನ್ಸಾನಿಯತ್( ಮನುಷ್ಯತ್ವ) ಎಂದು ಕೂಡ ಕರೆಯಲು ಸಾಧ್ಯವಿಲ್ಲ. ಕೆಲವರು ಮಾತುಕತೆಗೆ ಹೋದಾಗ ಅದನ್ನು ನಿರಾಕರಿಸಿದರೆ, ಅದು ಜಮೂರಿಯತ್(ಪ್ರಜಾಪ್ರಭುತ್ವ) ಅಲ್ಲ. ನಾವು ಶಾಂತಿ ಮತ್ತು ಸಹಜಸ್ಥಿತಿ ಬಯಸುವ ಪ್ರತಿಯೊಬ್ಬರ ಜತೆ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳಿದರು.