14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಪ್ರಮಾಣ ವಚನ ಸ್ವೀಕಾರ

ಮಂಗಳವಾರ, 25 ಜುಲೈ 2017 (12:49 IST)
ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
 
ಮಧ್ಯಾಹ್ನ 12.15ರ ಸಮಯದಲ್ಲಿ ಕೋವಿಂದ್ ಪ್ರಮಾಣವಚನ ಸ್ವೀಕರಿಸಿದ್ದು, ಈಶ್ವರನ ಹೆಸರಲ್ಲಿ ಸಂವಿಧಾನ ಬದ್ಧ ಅಧಿಕಾರವನ್ನು ಶ್ರದ್ಧಾಪೂರ್ವಕವಾಗಿ ಮತ್ತು ನಿಷ್ಪಕ್ಷಪಾತವಾಗಿ  ನಿರ್ವಹಣೆ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ. 
 
ಪ್ರಮಾಣವಚನ ಸ್ವೀಕಾರದ ಬಳಿಕ ಸಂಸತ್ ಆವರಣದ ಹೊರಗೆ ರಕ್ಷಣಾ ಸಿಬ್ಬಂದಿ 21 ಸುತ್ತು ಕುಶಾಲು ತೋಪು ಸಿಡಿಸುವ ಮೂಲಕ ನೂತನ ರಾಷ್ಟ್ರಪತಿಗಳಿಗೆ ಗೌರವ ರಕ್ಷೆ ನೀಡಲಾಯಿತು. ರಾಮನಾಥ್‌ ಕೋವಿಂದ್‌ ಪದಗ್ರಹಣ ಮಾಡುವುದಕ್ಕೂ ಮುನ್ನ ಕೋವಿಂದ್‌ ಅವರು ಪತ್ನಿ ಸಮೇತರಾಗಿ ರಾಜ್‌ಘಾಟ್‌‌ಗೆ ಭೇಟಿ ಕೊಟ್ಟು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ನಮನ ಸಲ್ಲಿಸಿದರು. ಬಳಿಕ ರಾಷ್ಟ್ರಪತಿ ಭವನಕ್ಕೆ ಬಂದ ಕೋವಿಂದ್ ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರೊಂದಿಗೆ ಕಾರಿನಲ್ಲಿ ಮೆರವಣಿಗೆ ಮೂಲಕ ಸಂಸತ್‌ ಭವನಕ್ಕೆ ಆಗಮಿಸಿದರು.
 

ವೆಬ್ದುನಿಯಾವನ್ನು ಓದಿ