ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ: ಅಂಗೈಯಲ್ಲಿ ಡೆತ್‌ನೋಟ್ ಬರೆದಿಟ್ಟು ವೈದ್ಯೆ ಸೂಸೈಡ್

Sampriya

ಶುಕ್ರವಾರ, 24 ಅಕ್ಟೋಬರ್ 2025 (18:43 IST)
Photo Credit X
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹೋಟೆಲ್ ಕೋಣೆಯಲ್ಲಿ ಸರ್ಕಾರಿ ಆಸ್ಪತ್ರೆಯ ಮಹಿಳಾ ವೈದ್ಯೆಯೊಬ್ಬರು ಮೃತಪಟ್ಟಿರುವುದು ವರದಿಯಾಗಿದೆ. 

ಅಂಗೈನಲ್ಲಿ ಡೆತ್‌ನೋಟ್ ಬರೆದಿಟ್ಟಿರುವುದರಲ್ಲಿ  ಪೊಲೀಸ್ ಸಿಬ್ಬಂದಿಯಿಂದ ಅತ್ಯಾಚಾರ ಮತ್ತು ಮತ್ತೊಬ್ಬ ಪೊಲೀಸ್ ಸಿಬ್ಬಂದಿಯಿಂದ ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಗುರುವಾರ ತಡರಾತ್ರಿ ಫಾಲ್ಟನ್‌ನ ಹೋಟೆಲ್ ಕೋಣೆಯಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.
ಮೃತರು ಬೀಡ್ ಜಿಲ್ಲೆಯವರಾಗಿದ್ದು, ಫಲ್ತಾನ್ ತಹಸಿಲ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನೆಯ ಅರಿವು ಪಡೆದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸತಾರಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿ, ಮೃತ ಮಹಿಳಾ ವೈದ್ಯೆಯು ಬಿಟ್ಟು ಹೋಗಿರುವ ಟಿಪ್ಪಣಿಯಲ್ಲಿ ಹೆಸರಿಸಲಾದ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆದೇಶಿಸಿದರು.

ಗೃಹ ಇಲಾಖೆ ಖಾತೆಯನ್ನು ಹೊಂದಿರುವ ಫಡ್ನವಿಸ್ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಆಕೆಯ ಅಂಗೈಯ ಮೇಲೆ ಬರೆದಿರುವ ಟಿಪ್ಪಣಿಯಲ್ಲಿ, ಕಳೆದ ಐದು ತಿಂಗಳಿನಿಂದ ಸತಾರಾ ಪೊಲೀಸ್‌ನ ಇಬ್ಬರು ಸಿಬ್ಬಂದಿ ತನ್ನ ಮೇಲೆ ಅತ್ಯಾಚಾರ ಮತ್ತು ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ವೈದ್ಯರು ಆರೋಪಿಸಿದ್ದಾರೆ.

ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬದನೆ ತನ್ನ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾನೆ ಮತ್ತು ಇನ್ನೊಬ್ಬ ಸಿಬ್ಬಂದಿ ಪ್ರಶಾಂತ್ ಬಣಕರ್ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಅವರು ಬರೆದಿದ್ದಾರೆ.

"ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಲಿಪಶುವಿನ ಕೈಯಲ್ಲಿರುವ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾದ ಆರೋಪಗಳ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ಸತಾರಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ, ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ ಚಕಂಕರ್, "ನಾವು ವಿಷಯದ ಬಗ್ಗೆ ತಿಳಿದುಕೊಂಡಿದ್ದೇವೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸತಾರಾ ಪೊಲೀಸರಿಗೆ ಆದೇಶಿಸಿದ್ದೇವೆ. ಆರೋಪಿಗಳ ಪತ್ತೆಗೆ ತಂಡಗಳನ್ನು ನಿಯೋಜಿಸಲಾಗಿದೆ. ಈ ದುರದೃಷ್ಟಕರ ಘಟನೆಯಲ್ಲಿ ಭಾಗಿಯಾಗಿರುವವರನ್ನು ಬಿಡಲಾಗುವುದಿಲ್ಲ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ