ಕ್ಷಮೆ ಕೇಳುವವರೆಗೂ ವಿಮಾನ ಹತ್ತಲು ಬಿಡಲ್ಲ: ಗಾಯಕ್ವಾಡ್ ಟಿಕೆಟ್ ರದ್ದು ಮಾಡಿದ ಏರ್ ಇಂಡಿಯಾ
ಶುಕ್ರವಾರ, 7 ಏಪ್ರಿಲ್ 2017 (12:02 IST)
ಮಾರ್ಚ್ 23ರಂದು ಏರ್ ಇಂಡಿಯಾ ಮ್ಯಾನೇಜರ್`ಗೆ ಚಪ್ಪಲಿಯಿಂದ ಹೊಡೆದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್`ಗೆ ಏರ್ ಇಂಡಿಯಾ ಸಿಬ್ಬಂದಿ ಬಿಸಿ ಮುಟ್ಟಿಸಿದ್ದಾರೆ. ಗಾಯಕ್ವಾಡ್ ಬುಕ್ ಮಾಡಿದ್ದ ಏರ್ ಟಿಕೆಟನ್ನ ಮತ್ತೆ ರದ್ದುಗೊಳಿಸಲಾಗಿದೆ. ಈ ತಿಂಗಳಾಂತ್ಯಕ್ಕೆ ಮುಂಬೈನಿಂದ ದೆಹಲಿ ಪ್ರಯಾಣಕ್ಕೆ ಗಾಯಕ್ವಾಡ್ ಏರ್ ಟಿಕೆಟ್ ಬುಕ್ ಮಾಡಿದ್ದರು.
ಗಾಯಕ್ವಾಡ್ ಬೇಷರತ್ ಕ್ಷಮೆ ಕೋರಬೇಕು ಮತ್ತು ಸಿಬ್ಬಂದಿಯ ಕ್ಷೇಮದ ದೃಷ್ಟಿಯಿಂದ ನಿಯಮಾವಳಿಗಳನ್ನ ಪಾಲಿಸುತ್ತೇನೆಂದು ಲಿಖಿತವಾಗಿ ಬರೆದುಕೊಡಬೇಕು. ಅಲ್ಲಿವರೆಗೂ ವಿಮಾನ ಹತ್ತಲು ಅವಕಾಶ ನೀಡಬಾರದೆಂದು ಏರ್ ಇಂಡಿಯಾ ಸಿಬ್ಬಂದಿ ಒತ್ತಾಯಿಸಿದ್ದಾರೆ.
ನಿನ್ನೆ ಈ ಕುರಿತು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ್ದ ರವಿಂದ್ರ ಗಾಯಕ್ವಾಡ್, ಲೋಕಸಭೆಗೆ ಮಾತ್ರ ನಾನು ಕ್ಷಮೆ ಕೋರುತ್ತೇನೆ. ಏರ್ ಇಂಡಿಯಾ ಸಂಸ್ಥೆಗಲ್ಲ ಎಂದು ಉದ್ಧಟತನ ಮೆರೆದಿದ್ದರು. ಅಲ್ಲದೆ, ಏರ್ ಇಂಡಿಯಾ ಸಿಬ್ಬಂದಿಯನ್ನ ಸಮರ್ಥಿಸಿಕೊಂಡಿದ್ದ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ವಿರುದ್ಧವೂ ಶಿವಸೇನಾ ಸಂಸದರು ಮುಗಿಬಿದ್ದಿದ್ದರು.