ನಾಚಿಕೆಯಿದ್ರೆ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿ: ಶರದ್ ಯಾದವ್‌ಗೆ ಜೆಡಿಯು

ಭಾನುವಾರ, 13 ಆಗಸ್ಟ್ 2017 (17:39 IST)
ರಾಜ್ಯಸಭಾ ಸದಸ್ಯ ಶರದ್ ಯಾದವ್ ವಿರುದ್ಧ ಜೆಡಿಯು ವಾಗ್ದಾಳಿ ನಡೆಸಿದ್ದು, ಅಲ್ಪಸ್ವಲ್ಪ ನಾಚಿಕೆ ಎನ್ನುವುದು ಏನಾದರೂ ಇದ್ದಲ್ಲಿ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದೆ.
 
ಶರದ್ ಯಾದವ್ ಪ್ರತಿಷ್ಠೆಯನ್ನು ಬದಿಗಿಟ್ಟು ಪಕ್ಷದ ತೀರ್ಮಾನಗಳಿಗೆ ಆದ್ಯತೆ ನೀಡಬೇಕು. ಒಂದು ವೇಳೆ, ಸಿಎಂ ನಿತೀಶ್ ಕುಮಾರ್ ವಿರುದ್ಧ ಹೇಳಿಕೆ ನೀಡುವುದು, ಪ್ರತಿಭಟನೆ ನಡೆಸುವುದೇ ಆಗಿದ್ದಲ್ಲಿ ರಾಜೀನಾಮೆ ನೀಡುವುದು ಸೂಕ್ತ ಎಂದು ತಿರುಗೇಟು ನೀಡಿದೆ.
 
ಬಿಹಾರ್ ರಾಜ್ಯದ ಜನತೆ ಮಹಾಮೈತ್ರಿಕೂಟಕ್ಕೆ ಬಹುಮತ ನೀಡಿದೆಯೇ ಹೊರತು ಭ್ರಷ್ಟಾಚಾರದಲ್ಲಿ ಭಾಗಿಯಾಗಲು ಅಲ್ಲ ಎನ್ನುವುದನ್ನು ಶರದ್ ಯಾದವ್ ಮರೆಯುವುದು ಸರಿಯಲ್ಲ. ನಾಚಿಕೆಯಿದ್ದಲ್ಲಿ ಜೆಡಿಯು ಪಕ್ಷಕ್ಕೆ ರಾಜೀನಾಮೆ ನೀಡಿ ಎಂದು ಜೆಡಿಯು ವಕ್ತಾರ ಅಜಯ್ ಅಲೋಕ್ ವಾಗ್ದಾಳಿ ನಡೆಸಿದ್ದಾರೆ.
 
ಬಿಜೆಪಿ, ಜೆಡಿಯು ಮೈತ್ರಿಗೆ ಶರದ್ ಯಾದವ್ ಅಸಮಾಧಾನಗೊಂಡಿರುವ ಕಾರಣಗಳು ಸ್ಪಷ್ಟವಾಗುತ್ತಿಲ್ಲ. ಇದೇ ರೀತಿ ಮುಂದುವರಿದಲ್ಲಿ ಜೆಡಿಯು ಇಬ್ಬಾಗವಾಗುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮುಖಂಡ ಎಸ್.ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
 
ಮುಖ್ಯಮಂತ್ರಿ ನಿತೀಶ್ ಕುಮಾರ್ ಪಕ್ಷದ ಮುಖಂಡರನ್ನು ಸಂಪರ್ಕಿಸಿ ಚರ್ಚೆ ನಡೆಸಿ ಸಮ್ಮತಿ ಪಡೆದ ನಂತರವೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಆದಾಗ್ಯೂ ಶರದ್ ಯಾದವ್ ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಯದಾಗಿದೆ ಎಂದು ಬಿಜೆಪಿ ಮುಖಂಡ ಪ್ರಕಾಶ್ ತಿಳಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ