ತ್ರಿಶ್ಶೂರ್: ಮಲಯಾಳಂ ಜನಪ್ರಿಯ ನಟ, ಬಿಜೆಪಿ ನಾಯಕ ಸುರೇಶ್ ಗೋಪಿ ಪುತ್ರಿಯ ಮದುವೆ ಜನವರಿ 17 ರಂದು ಪ್ರಸಿದ್ಧ ಗುರುವಾಯೂರು ದೇವಾಲಯದಲ್ಲಿ ನಡೆಯಲಿದೆ.
ಈ ಮದುವೆಗೆ ಸ್ವತಃ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಸುರೇಶ್ ಗೋಪಿ ಕೇರಳ ಬಿಜೆಪಿಯ ಪ್ರಬಲ ನಾಯಕ. ಸಂಸದರಾಗಿಯೂ ಅವರ ಕಾರ್ಯವೈಖರಿಯಿಂದ ಜನ ಮೆಚ್ಚುಗೆ ಪಡೆದವರು. ಮೋದಿಗೆ ಆಪ್ತ ನಾಯಕರಾಗಿದ್ದಾರೆ.
ಹೀಗಾಗಿ ಸುರೇಶ್ ಗೋಪಿ ಪುತ್ರಿ ಭಾಗ್ಯಾ ವಿವಾಹ ಕಾರ್ಯಕ್ರಮಕ್ಕೆ ಸ್ವತಃ ಮೋದಿ ಆಗಮಿಸುತ್ತಿದ್ದಾರೆ. ಸಾಮಾನ್ಯವಾಗಿ ಮೋದಿ ಹೀಗೆ ತಮ್ಮ ಪಕ್ಷದ ನಾಯಕರ ಮಕ್ಕಳ ಮದುವೆಗೆ ಆಗಮಿಸುವುದೇ ಅಪರೂಪ. ಆದರೆ ಕೇರಳದಲ್ಲಿ ತಮ್ಮ ಪಕ್ಷ ಬಲವರ್ಧನೆ ದೃಷ್ಟಿಯಿಂದಲೂ ಮೋದಿ ಮದುವೆಗೆ ಬರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಗುರುವಾಯೂರಿನಲ್ಲಿ ಜನವರಿ 17 ರಂದು ಬೆಳಿಗ್ಗೆ 8.30 ಕ್ಕೆ ಮದುವೆ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಅಂದು ಗುರುವಾಯೂರಿನಲ್ಲಿ ಎಂದಿನಂತೆ ನಡೆಯವ ಅನ್ನಪ್ರಾಶನ ಮತ್ತಿತರ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಅಲ್ಲದೆ, 6 ಗಂಟೆಯಿಂದ 9 ಗಂಟೆಯೊಳಗೆ ಮುಹೂರ್ತವಿದ್ದ ಬೇರೆ ಎಲ್ಲಾ ಸಾರ್ವಜನಿಕರ ಮದುವೆ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.
9 ಗಂಟೆಗೆ ಮೋದಿ ದೇವರ ದರ್ಶನ ಪಡೆಯಲಿದ್ದು, ಈ ಎಲ್ಲಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇದು ಕೇರಳದಲ್ಲಿ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಸಿಪಿಎಂ, ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳು ಈ ನಿರ್ಬಂಧವನ್ನು ಪ್ರಶ್ನಿಸಿದ್ದು, ಆ ದಿನ ಮಹೂರ್ತ ನಿಗದಿಪಡಿಸಿಕೊಂಡು ಕಾಯುತ್ತಿದ್ದ ಜೋಡಿಗಳು ಕೇವಲ ಒಬ್ಬ ನಟನ ಮಗಳ ಮದುವೆಗೆ ಪ್ರಧಾನಿ ಆಗಮಿಸುತ್ತಿದ್ದಾರೆಂಬ ಕಾರಣಕ್ಕೆ ಮುಂದೂಡಬೇಕೇ ಎಂದು ಟೀಕಿಸಿವೆ.