ಕೋಲ್ಕೊತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದಿದ್ದ ರೇಪ್ ಆಂಡ್ ಮರ್ಡರ್ ಕೇಸ್ ಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಎಫ್ಎಸ್ಎಲ್ ವರದಿ ಈಗ ಬಯಲಾಗಿದ್ದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆಗಸ್ಟ್ 9 ರಂದು ಟ್ರೈನಿ ವೈದ್ಯೆಯ ಮೃತದೇಹ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರ ನಡೆದಿದ್ದು ಸ್ಪಷ್ಟವಾಗಿತ್ತು. ಆದರೆ ಸೆಮಿನಾರ್ ಹಾಲ್ ನಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಎಫ್ಎಸ್ಎಲ್ ವರದಿ ಬಂದಿರುವುದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.
ಸಿಬಿಐಗೆ ಈ ವರದಿಯನ್ನು ಸೆಪ್ಟೆಂಬರ್ 11 ರಂದೇ ಸಲ್ಲಿಸಲಾಗಿತ್ತು ಎಂದು ಬಯಲಾಗಿದೆ. ಈ ವರದಿಯ ಪ್ರಕಾರ ಸೆಮಿನಾರ್ ಹಾಲ್ ನಲ್ಲಿ ವೈದ್ಯೆ ನರಳಿರುವ ಅಥವಾ ಪ್ರತಿರೋಧ ವ್ಯಕ್ತಪಡಿಸಿದ ಯಾವುದೇ ಕುರುಹುಗಳಿಲ್ಲ. ಹೀಗಾಗಿ ಅಲ್ಲಿ ಆಕೆಯ ಅತ್ಯಾಚಾರ ನಡೆದಿರುವ ಸಾಧ್ಯತೆ ಕಡಿಮೆ. ಬದಲಾಗಿ ಬೇರೆ ಕಡೆ ಕೃತ್ಯವೆಸಗಿ ಮೃತದೇಹವನ್ನು ಇಲ್ಲಿ ಹಾಕಿರಬಹುದೇ ಎಂಬ ಸಂಶಯ ಮೂಡಿದೆ.
ಸೆಮಿನಾರ್ ಹಾಲ್ ನ ಮರದ ಸ್ಟೇಜ್ ಅಥವಾ ಹತ್ತಿರದ ಭಾಗದಲ್ಲಿ ಕೃತ್ಯ ನಡೆದಿರುವುದಕ್ಕೆ ಜೈವಿಕ ಸಾಕ್ಷ್ಯವಿಲ್ಲ. ಹೀಗಾಗಿ ಇದೇ ಸ್ಥಳದಲ್ಲೇ ಕೃತ್ಯ ನಡೆದಿಲ್ಲವೇ ಎಂಬ ಸಂಶಯ ಮೂಡಿದೆ. ಇನ್ನು 24 ಗಂಟೆ ಕಾರ್ಯನಿರ್ವಹಿಸುವ, ವೈದ್ಯರು, ನರ್ಸ್ ಎಂದು ಓಡಾಡುವ ಜಾಗದಲ್ಲಿ ಹೊರಗಿನಿಂದ ಯಾರೋ ಸೆಮಿನಾರ್ ಹಾಲ್ ಗೆ ಯಾರ ಕಣ್ಣಿಗೂ ಬೀಳದಂತೆ ಹೋಗಲು ಹೇಗೆ ಸಾಧ್ಯ ಎಂಬ ಅನುಮಾನವೂ ಮೂಡಿದೆ. ಈ ವರದಿ ಈಗ ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ.