ನವದೆಹಲಿ: ಇತ್ತೀಚೆಗೆ ಲೋಕಸಭೆ ಚುನಾವಣೆ ವೇಳೆ ವಿವಾದಾತ್ಮಕ ಹೇಳಿಕೆಗಳಿಂದ ಕಾಂಗ್ರೆಸ್ ಗೆ ಮುಜುಗರ ತಂದಿಟ್ಟಿದ್ದ ಸ್ಯಾಮ್ ಪಿತ್ರೋಡಾರನ್ನು ಕಾಂಗ್ರೆಸ್ ಈಗ ಮತ್ತೆ ಸಾಗರೋತ್ತರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದೆ.
ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ನ ಸಾಗರೋತ್ತರ ವಿಭಾಗದ ಮುಖ್ಯಸ್ಥರಾಗಿದ್ದರು. ಆದರೆ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ಆಸ್ತಿ ಮೇಲೆ ತೆರಿಗೆ ವಿಧಿಸಬಹುದು ಎಂದಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದು ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಚುನಾವಣೆಯಲ್ಲಿ ದೊಡ್ಡ ಅಸ್ತ್ರವಾಗಿತ್ತು.
ಈ ವಿವಾದ ಮುಗಿಯುತ್ತಿದ್ದಂತೇ ಭಾರತೀಯರ ವರ್ಣದ ಬಗ್ಗೆ ಮಾತನಾಡಿ ಭಾರೀ ವಿವಾದಕ್ಕೊಳಗಾಗಿದ್ದರು. ಈ ಎಲ್ಲಾ ವಿವಾದದ ಬಳಿಕ ಸ್ಯಾಮ್ ಪಿತ್ರೋಡಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಅವರನ್ನು ಮತ್ತೆ ಅದೇ ಹುದ್ದೆಗೆ ನೇಮಕ ಮಾಡಲಾಗಿದೆ.
ಈ ಬಗ್ಗೆ ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಸ್ಯಾಮ್ ಪಿತ್ರೋಡಾರನ್ನು ಈ ಕೂಡಲೇ ಜಾರಿಯಾಗುವಂತೆ ಸಾಗರೋತ್ತರ ವಿಭಾಗದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.