ಕಿವುಡ ಮಕ್ಕಳಿಗೆ ಶ್ರವಣ ಸಾಧನ ದೇಣಿಗೆ: ಆದರೆ ಹಣವನ್ನೇ ಪಾವತಿಸದ ಶಶಿಕಲಾ

ಶನಿವಾರ, 8 ಜುಲೈ 2017 (19:46 IST)
ಚೆನ್ನೈ:ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜೈಲುಪಾಲಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಪಕ್ಷದ ಸಂಸ್ಥಾಪಕ ಎಂ ಜಿ ರಾಮಚಂದ್ರನ್ ಅವರ 100ನೇ ಜನ್ಮದಿನಾಚರಣೆ ಅಂಗವಾಗಿ ಜನವರಿ 17ರಂದು ಡಾ. ಎಂ ಜಿಆರ್ ಶಾಲೆಯ ಮೂಕ ಮತ್ತು ಕಿವುಡ ಮಕ್ಕಳಿಗಾಗಿ ಶ್ರವಣ ಸಾಧನಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಆದರೆ ಈ ಸಾಧನಗಳನ್ನು ಖರೀದಿಸಿದ ಕಂಪನಿಗೆ ಈವರೆಗೂ ಯಾವುದೇ ಹಣ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.
 
ಈ ಕುರಿತು ಸ್ವತ; ಕಂಪನಿಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶ್ರವಣ ಸಾಧನಗಳನ್ನು ತೆಗೆದುಕೊಂಡು ಹೋಗಿ ಸುಮಾರು 6 ತಿಂಗಳುಗಳು ಕಳೆದಿವೆಯಾದರೂ ಈ ವರೆಗೂ ಯಾವುದೇ ಹಣವನ್ನು ನೀಡಿಲ್ಲ ಎಂದಿದ್ದಾರೆ. ವಾಕ್ ಮತ್ತು ಶ್ರವಣ ಸಮಸ್ಯೆಯಿರುವ ಮಕ್ಕಳಿಗಾಗಿ ನಮ್ಮ ಕಂಪನಿಯಿಂದ ಸಾಧನಗಳನ್ನು ನೀಡಿದ್ದೇವೆ. ಅದರೆ ಈವರೆಗೆ ಶಶಿಕಲಾರಿಂದ ಯಾವುದೇ ಹಣ ಪಾವತಿಯಾಗಿಲ್ಲ ಎಂದು ದೂರಿದ್ದಾರೆ.
 
ಮಕ್ಕಳಿಗೆ 245 ಶ್ರವಣ ಸಾಧನದ ಕಿಟ್ ಗಳನ್ನು ನೀಡಲಾಗಿದ್ದು, ಒಟ್ಟು 18.13 ಲಕ್ಷ ರೂ ವೆಚ್ಚವಾಗಿದೆ. ಒಂದು ಕಿಟ್ ನ ಬೆಲೆ 7,400 ರೂ ಆಗಿದೆ. ಈ ಸಾಧನಗಳೆಲ್ಲವೂ ಹ್ಯಾನ್ಸಾಟನ್ ಮತ್ತು ರೆಕ್ಸ್ಟನ್ ಎಂಬ ಬ್ರ್ಯಾಂಡೆಡ್ ಕಂಪನಿಯ ಸಾಧನಗಳಾಗಿವೆ.
 
ಇನ್ನೊಂದು ವಿಚಾರವೇನೆಂದರೆ ಶಶಿಕಲಾ ಕಡೆಯಿಂದ ಇದೇ ಶಾಲೆಗೆ 10 ಲಕ್ಷ ರೂ ಗಳ ಚೆಕ್ ನೀಡಲಾಗಿದೆ. ಅದರೆ ಈ ಚೆಕ್ ನಲ್ಲಿನ ಸಹಿ ಹೋಲಿಕೆಯಾಗದೇ ಚೆಕ್ ಬೌನ್ಸ್ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದಾವುದರ ಕುರಿತಾಗಿಯೂ ಶಾಲಾ ಆಡಳಿತ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆಗಳೂ ಲಭ್ಯವಾಗಿಲ್ಲ.
 

ವೆಬ್ದುನಿಯಾವನ್ನು ಓದಿ