ಸಾಮಾನ್ಯರಿರಲಿ, ಅರಸನಿರಲಿ ಹೆತ್ತು, ಹೊತ್ತ ಮಕ್ಕಳು ತಮ್ಮ ಕಣ್ಣ ಮುಂದೆ ಅಗಲಿದರೆ ಆಗುವ ನೋವು ಎಲ್ಲರಿಗೂ ಒಂದೇ. ಸಿಎಂ ಸಿದ್ದರಾಮಯ್ಯ ತಮ್ಮ 39 ವರ್ಷದ ಮಗನನ್ನು ಕಳೆದುಕೊಂಡು ಕಣ್ಣೀರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ , ಕೇಂದ್ರ ಸಚಿವ ಸದಾನಂದ ಗೌಡರು ಸಹ ಈ ನೋವನ್ನು ಕಂಡವರೇ , ಈಗಲೂ ಅದನ್ನು ಅನುಭವಿಸುತ್ತಿರುವವರೇ.
ಸಿಎಂ ಸಿದ್ದರಾಮಯ್ಯ ಹಿರಿಯ ಪುತ್ರ ರಾಕೇಶ್ ರೂಪದಲ್ಲಿ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಕಂಡಿದ್ದರೆ, 13 ವರ್ಷಗಳ ಹಿಂದೆ ಗತಿಸಿದ ತಮ್ಮ ಪ್ರೀತಿಯ ಮಗ ಕೌಶಿಕ್‌ನಲ್ಲಿ ಡಿವಿಎಸ್ ತಮ್ಮರಾಜಕೀಯ ಉತ್ತರಾಧಿಕಾರಿಯನ್ನು ಕಂಡಿದ್ದರು. ಆದರೆ ಅಪಘಾತದ ರೂಪದಲ್ಲಿ ಡಿವಿಎಸ್ ಮಗನನ್ನು ವಿಧಿ ಸೆಳೆದುಕೊಂಡಿತ್ತು.
ಮತ್ತೀಗ ಸಿಎಂ ಸಿದ್ದರಾಮಯ್ಯ ಕೂಡ ಇದೇ ಪುತ್ರಶೋಕವನ್ನು ಅನುಭವಿಸುತ್ತಿದ್ದಾರೆ.ಇಬ್ಬರ ನೋವು ಸಮಾನವಾಗಿರುವುದರಿಂದ ಡಿವಿಎಸ್, ಸಿಎಂ ಅವರ ಶೋಕದ ಆಳವನ್ನು ಇತರರಿಗಿಂತೂ ಹೆಚ್ಚು ಅರ್ಥ ಮಾಡಿಕೊಳ್ಳಬಲ್ಲರು. ಇದೇ ಕಾರಣಕ್ಕೆ ನಿನ್ನೆ ರಾಕೇಶ್ ಶವಕ್ಕೆ ಪುಷ್ಪಗೌರವ ಅರ್ಪಿಸಲು ಬಂದ ಡಿವಿಎಸ್ ಕಂಬನಿಯನ್ನು ತಡೆ ಹಿಡಿಯದಾದರು. ಕಣ್ಣೀರು ಸುರಿಸುತ್ತಾ ಅಲುಗಾಡದೆ ನಿಂತಿದ್ದ ಸಿದ್ದರಾಮಯ್ಯನವರನ್ನುತಬ್ಬಿಕೊಂಡು ತಾವು ಕೂಡ ಅಳುತ್ತ ಸಮಾಧಾನ ಮಾಡುತ್ತಿದ್ದರು. ಅದಕ್ಕೆ ಮೌನವಾಗಿ ತಲೆಯಾಡಿಸುತಿದ್ದ ಸಿಎಂ ಕಣ್ಣೀರು ಸುರಿಸುತ್ತಾ ಹಾಗೆಯೇ ನಿಂತಿದ್ದರು.
ಕಾಂಗ್ರೆಸ್ ಹಿರಿಯ ನಾಯಕ ಸಚಿವ ಡಿ.ಕೆ. ಶಿವಕುಮಾರ್ ಸಹ ಸಿಎಂ ಅವರನ್ನು ಆಲಂಗಿಸಿಕೊಂಡು ಕಣ್ಣೀರು ಸುರಿಸಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.