ಬೆಂಗಳೂರು: ಮಧ್ಯರಾತ್ರಿ ಯುವತಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಅವರು ಪ್ರತಿಕ್ರಿಯಿಸಿ, ಇದು ಆಘಾತಕಾರಿ ಘಟನೆ. ರಾಜ್ಯ ರಾಜಧಾನಿಯಂತಹ ದೊಡ್ಡ ನಗರಗಳಲ್ಲಿ ಇಂತಹ ಘಟನೆಗಳು ಸಂಭವಿಸಿರುವುದು ಶಾಕ್ ಆಗಿದೆ ಎಂದು ಹೇಳಿದರು.
ಇಂತಹ ದೊಡ್ಡ ನಗರದಲ್ಲಿ ಈ ರೀತಿಯ ಘಟನೆ ನಡೆದಿರುವುದು ಆಘಾತಕಾರಿ. ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಎನ್‌ಐ ಜತೆ ಹೇಳಿದರು.
ಬೆಂಗಳೂರಿನ ಸದ್ದುಗುಂಟೆಪಾಳ್ಯ ಬಳಿಯ ಬೀದಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಘಟನೆ ಏ.3ರಂದು ನಡೆದಿದ್ದು, ಸ್ನೇಹಿತೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಹಿಂದೆಯಿಂದ ಬಂದ ವ್ಯಕ್ತಿಯೊಬ್ಬ ತಬ್ಬಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿಡಿಯೋ ವೈರಲ್ ಬೆನ್ನಲ್ಲೇ, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಘಟನೆಯ ನಂತರ, ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 74, 75 ಮತ್ತು 78 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ನೇಯ ಬೆಂಗಳೂರಿನ ಉಪ ಪೊಲೀಸ್ ಆಯುಕ್ತೆ (ಡಿಸಿಪಿ) ಸಾರಾ ಫಾತಿಮಾ, ಅಪರಾಧಿಯನ್ನು ಗುರುತಿಸಲು ಮತ್ತು ಬಂಧಿಸಲು ತನಿಖೆಗಳು ನಡೆಯುತ್ತಿವೆ ಎಂದು ದೃಢಪಡಿಸಿದರು.