ಶ್ರೀನಗರ : ಕಣಿವೆ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಪರಾಮರ್ಶಿಸಲು ಮೂರು ದಿನಗಳ ಪ್ರವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಜಮ್ಮು-ಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ. ಉಗ್ರರಿಂದ ಇತ್ತೀಚೆಗೆ ನಾಗರಿಕರ ಹತ್ಯೆ ಮತ್ತು ಹೆಚ್ಚಿನ ಉಪಟಳ, ಕಣಿವೆ ಪ್ರದೇಶದಲ್ಲಿ ಬೆಳವಣಿಗೆಗಳ ಬಗ್ಗೆ ಪರಾಮರ್ಶೆ ನಡೆಸಲು ಈ ಭೇಟಿ ಕೈಗೊಳ್ಳುತ್ತಿದ್ದಾರೆ.
ಕೇಂದ್ರ ಗೃಹ ಸಚಿವರ ಭೇಟಿ ಸಂದರ್ಭದಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ. ಭದ್ರತೆ ವಿಚಾರವಾಗಿ ತಾತ್ಕಾಲಿಕ ಚೆಕ್ ಪಾಯಿಂಟ್ ಗಳನ್ನು ಮತ್ತು ಹೊಸ ಬಂಕರ್ ಗಳನ್ನು ಶ್ರೀನಗರ ಮತ್ತು ಕಣಿವೆ ಪ್ರದೇಶದ ಬೇರೆ ಕಡೆಗಳಲ್ಲಿ ರಚಿಸಲಾಗಿದೆ. 1990ರ ದಶಕದಲ್ಲಿ ಇಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾದ ಮೇಲೆ ಮಹಿಳಾ ಸಿಆರ್ ಪಿಎಫ್ ಸಿಬ್ಬಂದಿಯನ್ನು ಲಾಲ್ ಚೌಕ್ ನ ನಗರ ಕೇಂದ್ರದಲ್ಲಿ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ತೆಗೆದುಹಾಕಲಾಗಿದೆ.
ದಾಲ್ ಸರೋವರದ ತೀರದ ಬೌಲೆವರ್ಡ್ ರಸ್ತೆಯನ್ನು ಸಾರ್ವಜನಿಕ ಓಡಾಟಕ್ಕೆ ಇಂದಿನಿಂದ ನಾಡಿದ್ದು 25ರವರೆಗೆ ನಿಷೇಧಿಸಲಾಗಿದೆ. ಬದಲಿ ಮಾರ್ಗಗಗಳನ್ನು ಬಳಸಲು ಜನರಿಗೆ ಸೂಚಿಸಲಾಗಿದೆ.