ಶ್ರೀನಗರ, ಅ 06 : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಮೂವರು ಅಮಾಯಕರನ್ನು ಬಲಿ ಪಡೆದಿದೆ. ಜಮ್ಮು - ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಪರಿಣಾಮ ಖ್ಯಾತ ಕಾಶ್ಮೀರ ಪಂಡಿತ್ ಉದ್ಯಮಿ ಮಖನ್ ಲಾಲ್ ಬಿಂದ್ರೂ ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ.
ಉದ್ಯಮಿ ಮಖನ್ ಔಷಧಾಲಯದಲ್ಲಿ ಕೆಲಸ ಮಾಡ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಆತ ಸಾವನ್ನಪ್ಪಿದ್ದಾನೆ. ಮತ್ತೊಂದು ದಾಳಿಯಲ್ಲಿ ಬೀದಿ ಬದಿ ವ್ಯಾಪಾರಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಶ್ರೀನಗರದ ಹೊರವಲಯದ ಹವಾಲ್ ಮದಿನ್ ಸಾಹಿಬ್ ಬಳಿ ಈ ಘಟನೆ ನಡೆದಿದೆ ಎಂಧು ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಮತ್ತೊಂದು ದಾಳಿಯಲ್ಲಿ ಮದೀನಾ ಚೌಕ್ ಬಳಿ ಸ್ಥಳೀಯನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಗಳಲ್ಲಿ ಯೋಧರು ಹಾಗೂ ಪೊಲೀಸರು ಸುತ್ತುವರೆದಿದ್ದು, ಉಗ್ರರ ಶೋಧಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
2019ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಭಯೋತ್ಪಾಕರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಾಕಿಸ್ತಾನದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಗುಂಪುಗಳ ಭಯೋತ್ಪಾದಕರು ಜಮ್ಮು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂದು ಯೂರೋಪಿಯನ್ ಯೂನಿಯನ್ ಟುಡೇ ಸಂಸ್ಥೆಯು ನಿಕ್ಕಿ ಏಷ್ಯಾದ ವರದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.