ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಕೊಟ್ಟಿದ್ದಾರೆ. ಎರಡೂವರೆ ವರ್ಷದ ಮಹಾ ಆಘಾಡಿ ಸರ್ಕಾರ ಪತನಗೊಂಡಿದೆ.
ಬುಧವಾರ ಸುಪ್ರೀಂಕೋರ್ಟ್ನಲ್ಲಿ ಸುದೀರ್ಘ ವಾದ-ಪ್ರತಿವಾದ ನಡೀತು. ಆದರೆ ವಿಶ್ವಾಸಮತ ಸಾಬೀತಿಗೆ ಸುಪ್ರೀಂಕೋರ್ಟ್ ಸೂಚಿಸಿತು. ಇದರಿಂದ ಸೋಲೊಪ್ಪಿಕೊಂಡ ಉದ್ಧವ್ ಠಾಕ್ರೆ ಇವತ್ತಿನ ವಿಶ್ವಾಸಮತಕ್ಕೂ ಮುನ್ನ ನಿನ್ನೆ ರಾತ್ರಿಯೇ ರಾಜೀನಾಮೆ ಘೋಷಿಸಿದ್ರು.
ಫೇಸ್ಬುಕ್ನಲ್ಲಿ ಲೈವ್ ಬರುವ ಮೂಲಕ ತಮ್ಮ ರಾಜೀನಾಮೆ ಘೋಷಿಸಿದ ಠಾಕ್ರೆ, ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ಕೊಡುತ್ತಿರುವುದಾಗಿ ಹೇಳಿದ್ರು. ಸೋನಿಯಾ, ಶರದ್ ಪವಾರ್ಗೆ ಧನ್ಯವಾದ ತಿಳಿಸಿದ್ರು.
ಬಳಿಕ ರಾಜಭವನಕ್ಕೆ ಖುದ್ದು ಕಾರು ಚಲಾಯಿಸಿಕೊಂಡು ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ್ರು. ರಾಜ್ಯಪಾಲರು ಠಾಕ್ರೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಇಂದು ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸೋ ಸಾಧ್ಯತೆಗಳಿವೆ. ಜುಲೈ 1ಕ್ಕೆ ರೆಬೆಲ್ಸ್ ಬೆಂಬಲಿತ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಹೈಕಮಾಂಡ್ ಮುಂಬೈಗೆ ಬರುವಂತೆ ಬುಲಾವ್ ನೀಡಿದೆ. ರವಿ ಮಹಾರಾಷ್ಟ್ರ, ಗೋವಾ, ತಮಿಳನಾಡಿನಲ್ಲಿ ಪಕ್ಷದ ಉಸ್ತುವಾರಿ ಆಗಿದ್ದಾರೆ.