ನವದೆಹಲಿ: ಮುಡಾ ಹಗರಣ ಸಂಬಂಧ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ನೀಡದಿರುವುದಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜತೆ ಹೇಗೆ ಭಾಗಿಯಾಗಲಿ ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಅವರು ಕಿಡಿಕಾರಿದರು. ಹಾಸನದಲ್ಲಿ ಬೀದಿ ಬೀದಿಗಳಲ್ಲಿ ಪೆನ್‌ಡ್ರೈವ್ ಸಿಗಲು ಕಾರಣರಾಗಿರುವವರ ಜತೆ ನಾನು ವೇದಿಕೆ ಹಂಚಿಕೊಳ್ಳಲೇ ಎಂದು ಪ್ರಶ್ನಿಸಿದರು.
ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜತೆ ನಾನು ಹೇಗೆ ಭಾಗಿಯಾಗಲಿ ಎಂದು ಪ್ರೀತಂ ವಿರುದ್ಧ ಮೊದಲ ಬಾರಿ ಆಕ್ರೋಶ ಹೊರಹಾಕಿದ್ದಾರೆ.
ಮುಡಾ ಹಗರಣವನ್ನು ವಿರೋಧಿಸಿ ಪಾದಯಾತ್ರೆ ಬಗ್ಗೆ ಬಿಜೆಪಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದ್ದು, ಇದಕ್ಕೆ ಜೆಡಿಎಸ್‌ನಿಂದ ನೈತಿಕ ಬೆಂಬಲವು ಇರುವುದಿಲ್ಲ. ನಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಬೆಂಬಲ ನೀಡುತ್ತಿಲ್ಲ. ಈ ವಿಚಾರದಿಂದ ನನ್ನ ಮನಸ್ಸಿಗೂ ನೋವಾಗಿದೆ ಎಂದು ಹೇಳಿದ್ದಾರೆ.