ಉತ್ತರ ಪ್ರದೇಶದ ಕಾನ್ಪುರದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಹಾವೊಂದು ಸತತ ಮೂರು ಗಂಟೆಗಳ ಕಾಲ ಯುವತಿಯೋರ್ವಳ ಕೊರಳಿಗೆ ಸುತ್ತಿ ಕೊಂಡಿದೆ. ಈ ವೈಚಿತ್ರ್ಯವನ್ನು ನೋಡಿದ ಜನರು ಆಕೆ ನಾಗದೇವಿಯ ಅವತಾರವೆಂದು ಪೂಜೆ-ಪುನಸ್ಕಾರವನ್ನು ಪ್ರಾರಂಭಿಸಿಬಿಟ್ಟಿದ್ದಾರೆ.
ಕಾನ್ಪುರದ ಪತಾರಾ ಬ್ಲಾಕ್ನ ಅರಖೈಯಾ ಗ್ರಾಮದ ನಿವಾಸಿ ಶ್ರವಣ್ ಕುಮಾರ್ ಪುತ್ರಿ ಖುಷ್ಬು ಕೊರಳಿಗೆ ಸುತ್ತಿಕೊಂಡ ಹಾವು ಮೂರು ಗಂಟೆ ಹಾಗೆಯೇ ಇತ್ತು. ಆಕೆಗೆ ಅದೇನು ಹಾನಿ ಮಾಡಿಲ್ಲ. ಆ ಸಮಯದಲ್ಲಿ ಯುವತಿ ಕೂಡ ವಿಚಿತ್ರವಾಗಿ ವರ್ತಿಸಿದ್ದಾಳೆ.
ಮಗಳ ಕೊರಳಿಗೆ ಹಾವು ಸುತ್ತಿಕೊಂಡಿದ್ದನ್ನು ನೋಡಿದ ಪೋಷಕರು ಹೌಹಾರಿ ಹೋಗಿದ್ದಾರೆ. ಈ ಸುದ್ದಿ ಊರಿಗೆಲ್ಲ ಹರಡುತ್ತಿದ್ದಂತೆ ಜನ ಸಾಗರವೇ ಆಕೆಯ ಮನೆ ಮುಂದೆ ನೆರೆದಿದ್ದು ಗ್ರಾಮಸ್ಥರ ಪಾಲಿಗೆ ಆಕೆ ದೇವಿಯಾಗಿ ಬಿಟ್ಟಿದ್ದಾಳೆ.
ಆಕೆ ದೇವಿಯ ಅವತಾರವೆಂದು ಕೆಲವರು ಪೂಜಿಸಿದರೆ ಮತ್ತೆ ಕೆಲವರು ಆಕೆಯ ಮುಂದೆ ಹಾಲು, ಹೂವುಗಳನ್ನಿಟ್ಟು ಭಕ್ತಿಯನ್ನು ಹರಿಸುತ್ತಿದ್ದಾರೆ.
ಮತ್ತೀಗ ಆಕೆಯ ಪರಿವಾರದವರು ಕೂಡ ಮಗಳು ದೇವಿ ಅವತಾರವೆನ್ನುತ್ತಿದ್ದಾರೆ. ಪ್ರತಿ ಹುಣ್ಣಿಗೆ ಊರ ಜನರು ಆಕೆಯ ಬಳಿ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಲು ಆಗಮಿಸುತ್ತಿದ್ದಾರೆ.