ಸೋನು ಸೂದ್ ವಾಹನ ಜಪ್ತಿ

ಸೋಮವಾರ, 21 ಫೆಬ್ರವರಿ 2022 (09:18 IST)
ಮತದಾರರ ಮೇಲೆ ಪ್ರಭಾವ ಸೇರಿ ಹಲವು ಶಂಕಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ ಆರೋಪದಲ್ಲಿ ನಟ, ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಅವರ ವಾಹನವನ್ನು ಮತಗಟ್ಟೆ ಪ್ರವೇಶಿಸುವುದರಿಂದ ತಡೆದಿದ್ದಲ್ಲದೆ,
 
ಅವರ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಸಾಚರ್, ಮೋಗಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಹಲವು ದಿನಗಳಿಂದ ಸೋನು ಸೂದ್ ಪ್ರಚಾರ ನಡೆಸಿದ್ದಾರೆ.

ಆದರೆ, ಇವರು ಶಂಕಾಸ್ಪದ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶಿರೋಮಣಿ ಅಕಾಲಿ ದಳ ಅಭ್ಯರ್ಥಿ ಬರ್ಜಿಂದರ್ ಸಿಂಗ್ ಅವರ ಬೆಂಬಲಿಗರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

'ಸೋನು ಸೂದ್ ಅವರು ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಅವರನ್ನು ತಡೆದು, ಕಾರು ಜಪ್ತಿ ಮಾಡಿ ಮನೆಗೆ ಕಳುಹಿಸಲಾಗಿದೆ. ಹಾಗೆಯೇ, ಅವರು ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ' ಎಂದು ಮೋಗಾ ಜಿಲ್ಲೆ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್ಒ) ಪ್ರದೀಪ್ ಸಿಂಗ್ ತಿಳಿಸಿದ್ದಾರೆ.

ಆದರೆ, ಆರೋಪ ನಿರಾಕರಿಸಿರುವ ಸೋನು, 'ನಾನು ಸ್ಥಳೀಯ ನಿವಾಸಿಯಾಗಿದ್ದು, ಯಾವ ಅಭ್ಯರ್ಥಿ ಅಥವಾ ಯಾವುದೇ ಪಕ್ಷದ ಪರ ಮತ ಚಲಾಯಿಸಿ ಎಂದು ಹೇಳಿಲ್ಲ' ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ