ಜೂನ್‌ 24ರಿಂದ ಸಂಸತ್‌ ವಿಶೇಷ ಅಧಿವೇಶನ: ಸ್ಪೀಕರ್‌ ಆಯ್ಕೆಗೆ ಚುನಾವಣೆ ಸಾಧ್ಯತೆ

Sampriya

ಮಂಗಳವಾರ, 11 ಜೂನ್ 2024 (14:14 IST)
Photo Courtesy X
ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಕೂಟವು ಸರಳ ಬಹುಮತದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದೆ. ನರೇಂದ್ರ ಮೋದಿ ಅವರು ಭಾನುವಾರ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ 71 ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ, ಜೂನ್‌ 24ರಿಂದ ಜುಲೈ 3ರವರೆಗೆ ಸಂಸತ್ ವಿಶೇಷ ಅಧಿವೇಶನ ಕರೆಯಲಾಗಿದೆ.

ಜೂನ್‌ 24ರಿಂದ ಸಂಸತ್‌ ವಿಶೇಷ ಅಧಿವೇಶನ ಆರಂಭವಾಗುತ್ತದೆ. ಜೂನ್‌ 24 ಹಾಗೂ ಜೂನ್‌ 25ರಂದು ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್‌ 26ರಂದು ಲೋಕಸಭೆ ಸ್ಪೀಕರ್‌ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟು 8 ದಿನಗಳವರೆಗೆ ವಿಶೇಷ ಅಧಿವೇಶನ ನಡೆಯಲಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಯಾವುದೇ ವಿಧೇಯಕಗಳ ಮಂಡನೆ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಸಚಿವರಿಗೆ ಖಾತೆ ಹಂಚಿಕೆಯಲ್ಲೂ ನರೇಂದ್ರ ಮೋದಿ ಅವರೇ ಪ್ರಾಬಲ್ಯ ಮೆರೆದಿದ್ದಾರೆ. ಕೇಂದ್ರ ಗೃಹ ಖಾತೆಯನ್ನು ಅಮಿತ್‌ ಶಾ ಅವರಿಗೆ, ಹಣಕಾಸು ಖಾತೆಯನ್ನು ನಿರ್ಮಲಾ ಸೀತಾರಾಮನ್‌, ರಕ್ಷಣಾ ಖಾತೆಯನ್ನು ರಾಜನಾಥ್‌ ಸಿಂಗ್‌ ಹಾಗೂ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಖಾತೆಯನ್ನು ನಿತಿನ್‌ ಗಡ್ಕರಿ ಅವರಿಗೇ ನೀಡುವ ಮೂಲಕ ನರೇಂದ್ರ ಮೋದಿ ಅವರು ಮೊದಲಿನಂತೆಯೇ ಬಿಜೆಪಿ ಬಳಿಯೇ ಉಳಿಸಿಕೊಳ್ಳುವ ಮೂಲಕ ಚಾಣಾಕ್ಷತನ ಮೆರೆದಿದ್ದಾರೆ. ಅಷ್ಟೇ ಅಲ್ಲ, ಮೈತ್ರಿ ಸರ್ಕಾರದ ಮೇಲೆಯೂ ತಮ್ಮ ಹಿಡಿತ ಇದೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ