ಖರ್ಚಿನ ವಿವರ ಕೇಳಿದ್ದಕ್ಕೆ ಹುಡುಗನ ಬೆತ್ತಲೆ ಮಾಡಿ ವಿಡಿಯೋ ಮಾಡಿದರು!
ಸೋಮವಾರ, 4 ಜೂನ್ 2018 (09:20 IST)
ಕೋಲ್ಕೊತ್ತಾ: ಕೋಲ್ಕೊತ್ತಾದ ಪ್ರತಿಷ್ಠಿತ ಕಾಲೇಜೊಂದರಲ್ಲಿ ನಾಗರಿಕ ಸಮಾಜ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಕಾಲೇಜು ಸಮಾರಂಭವೊಂದರ ಖರ್ಚಿನ ವಿವರ ಕೇಳಿದ್ದಕ್ಕೆ ವಿದ್ಯಾರ್ಥಿ ಸಂಘಟನೆಯ ಸದಸ್ಯನೊಬ್ಬನನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿರುವ ಆಘಾತಕಾರಿ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೇ 17 ರಂದು ಈ ಘಟನೆ ನಡೆದಿತ್ತು. ಆದರೆ ಇದೀಗ ಆರೋಪಿ ವಿದ್ಯಾರ್ಥಿಗಳಲ್ಲೊಬ್ಬಾತ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.
ಬೆತ್ತಲೆಯಾದ ವಿದ್ಯಾರ್ಥಿ ಹಾಗೂ ಆರೋಪಿಗಳು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗಿದ್ದಾರೆ. ತನ್ನದೇ ಸಂಘಟನೆಯು ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಮಾಡಿದ ಖರ್ಚಿನ ವಿವರಗಳನ್ನು ಪ್ರಶ್ನಿಸಿದ್ದಕ್ಕೆ ಸಂಘಟನೆಯ ಕೆಲವು ಸದಸ್ಯರು ಈತನನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿದ್ದರು. ಆ ವಿಡಿಯೋದಲ್ಲಿ ಆತ ಬಿಟ್ಟುಬಿಡುವಂತೆ ಬೇಡಿಕೊಳ್ಳುವ ದೃಶ್ಯವೂ ಇದೆ ಎನ್ನಲಾಗಿದೆ. ಈ ಬಗ್ಗೆ ಇದೀಗ ವಿದ್ಯಾರ್ಥಿ ಪೊಲೀಸರಿಗೆ ದೂರು ನೀಡಿದ್ದಾನೆ. ಅತ್ತ ರಾಜ್ಯ ಶಿಕ್ಷಣ ಸಚಿವರೂ ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.