ಸ್ಯಾನಿಟರಿ ಪ್ಯಾಡ್ ಗಳನ್ನು ಪ್ರಧಾನಿ ಮೋದಿಗೆ ಕಳುಹಿಸಲಿದ್ದಾರಂತೆ ವಿದ್ಯಾರ್ಥಿಗಳು!
ಗುರುವಾರ, 11 ಜನವರಿ 2018 (10:59 IST)
ಮಧ್ಯಪ್ರದೇಶ : ಪ್ರಧಾನಿ ಮೋದಿ ಅವರು ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಜಿಎಸ್ ಟಿ ತೆರಿಗೆಯನ್ನು ವಿಧಿಸಿದ ಹಿನ್ನಲೆಯಲ್ಲಿ ಅದನ್ನು ಹಿಂಪಡೆಯುವಂತೆ ಮಧ್ಯಪ್ರದೇಶದ ವಿದ್ಯಾರ್ಥಿಗಳು ಮೋದಿ ಅವರ ವಿರುದ್ದ ಪ್ರತಿಭಟನೆ ಮಾಡಲು ಪ್ರಾರಂಭಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸ್ಯಾನಿಟರಿ ಪ್ಯಾಡ್ ಗಳ ಮೇಲೆ 12% ಜಿಎಸ್ ಟಿ ತೆರಿಗೆಯನ್ನು ವಿಧಿಸಿದ್ದು, ಇದನ್ನು ತೆಗೆದು ಹಾಕಬೇಕು ಎಂದು ಮಧ್ಯಪ್ರದೇಶದ ಗ್ವಾಲಿಯಾರ್ ವಿದ್ಯಾರ್ಥಿಗಳು 1 ಸಾವಿರ ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಹಸ್ತಾಕ್ಷರ ಬರೆದು ಮೋದಿ ಅವರಿಗೆ ಕಳುಹಿಸುವ ನಿರ್ಧಾರ ಮಾಡಿದ್ದಾರೆ. ಇದರ ಬಗ್ಗೆ ಅವರು ಸಾಮಾಜಿಕ ತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದು, ಇದಕ್ಕೆ ಮಹಿಳೆಯರು ಕೂಡ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹಳ್ಳಿಪ್ರದೇಶದ ಮಹಿಳೆಯರು ಇದರಿಂದಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸದೆ ಬೇರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಕೆಲವು ರೋಗಗಳಿಗೆ ತುತ್ತಾಗಿದ್ದಾರೆ. ಸ್ಯಾನಿಟರಿ ಪ್ಯಾಡ್ ಗಳ ಮೇಲೆ ವಿಧಿಸಿದ ಜಿಎಸ್ ಟಿ ತೆರಿಗೆಯನ್ನು ಹಿಂಪಡೆಯಲು ಪ್ರಧಾನಿ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿ ತೆರಿಗೆಯನ್ನು ಹಿಂಪಡೆಯಬೇಕೆಂದು ಪ್ರತಿಭಟಿಸಿ, ಮಾರ್ಚ್ 3 ರೊಳಗೆ ಸುಮಾರು 1 ಸಾವಿರ ಪ್ಯಾಡಗಳನ್ನು ಪ್ರಧಾನಿಗೆ ಕಳುಹಿಸುವ ನಿರ್ಧಾರವನ್ನು ಮಾಡಿರುವುದಾಗಿ ವಿದ್ಯಾರ್ಥಿ ಮೋಹನ್ ಹೇಳಿದ್ದಾರೆ.
ಸ್ವಚ್ಚ ಭಾರತದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಅವರು ಮಹಿಳೆಯರ ಸ್ವಚ್ಚತೆ ಹಾಗು ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಈ ಪ್ರತಿಭಟನೆಯನ್ನು ಮಹಿಳೆಯರ ಶ್ರೇಯೋಭಿವೃದ್ಧಿಯ ಸಲುವಾಗಿ ಮಾಡುತ್ತಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ