ಜಲ್ಲಿಕಟ್ಟು ನಿಷೇಧ ತೆರವುಗೊಳಿಸಲು ಸುಪ್ರೀಂ ನಕಾರ

ಗುರುವಾರ, 12 ಜನವರಿ 2017 (11:30 IST)
ಜಲ್ಲಿಕಟ್ಟು ಮೇಲಿನ ನಿಷೇಧ ತೆರವುಗೊಳಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ಈ ಮೂಲಕ ತಮಿಳುನಾಡು ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. 
ಪೊಂಗಲ್ ಒಳಗೆ ತೀರ್ಪು ನೀಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಕೀಲರು ಸುಪ್ರೀಂ ವಕೀಲರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ  ಮೊದಲೇ ಆದೇಶ ನೀಡಿ  ಎಂದು ನಮ್ಮನ್ನು ಕೋರಿರುವುದು ಅಸಮಂಜಸ ಎಂದಿರುವ ಕೋರ್ಟ್ ಮನವಿಯನ್ನು ತಳ್ಳಿ ಹಾಕಿದೆ.
 
ಜಲ್ಲಿಕಟ್ಟಿಗೆ ಅವಕಾಶ ನೀಡಿ ಎಂದು ತಮಿಳಿನಾಡಿನಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ನಿನ್ನೆ ಅಷ್ಟೇ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ತಮಿಳುನಾಡು ರಾಜ್ಯದಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆದೇ ತೀರುತ್ತದೆ. ಈ ವಿಚಾರದಲ್ಲಿ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.
 
ಜಲ್ಲಿಕಟ್ಟು ಬದಲಾಗಿ ಬೇರೆ ಹೆಸರಿನಲ್ಲಿ ಸ್ಪರ್ಧೆಯನ್ನು ನಡೆಸಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಕುರಿತು ಸರ್ಕಾರ ಏನು ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು. 
 
ಜಲಿಕಟ್ಟು ಆಚರಣೆಗೆ ಗೂಳಿಗಳನ್ನು ಬಳಸುವುದಕ್ಕೆ 2014ರಲ್ಲಿ ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು. ನಿಷೇಧಿತ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಆಯೋಜಿಸಲು ಅವಕಾಶ ನೀಡುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ತಮಿಳುನಾಡು ಸರ್ಕಾರ ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿತ್ತು. 

ವೆಬ್ದುನಿಯಾವನ್ನು ಓದಿ