ಎಫ್ಐಆರ್ ಗಳಿಂದ ʼದಿ ವೈರ್ʼ ಪತ್ರಕರ್ತರಿಗೆ ಎರಡು ತಿಂಗಳು ರಕ್ಷಣೆಯೊದಗಿಸಿದ ಸುಪ್ರೀಂ

ಬುಧವಾರ, 8 ಸೆಪ್ಟಂಬರ್ 2021 (15:10 IST)
ಹೊಸದಿಲ್ಲಿ: ದಿ ವೈರ್ ಡಿಜಿಟಲ್ ಸುದ್ದಿ ತಾಣ ಪ್ರಕಟಿಸಿದ್ದ ಕೆಲ ಸುದ್ದಿಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಮೂರು ಎಫ್ಐಆರ್ಗಳಿಂದ ಸಂಸ್ಥೆಯ ಮೂವರು ವರದಿಗಾರರಿಗೆ ಸುಪ್ರೀಂ ಕೋರ್ಟ್ ಎರಡು ತಿಂಗಳು ರಕ್ಷಣೆಯೊದಗಿಸಿದೆ.

ಈ ಪ್ರಕರಣವನ್ನು ವಿಚಾರಣೆಯನ್ನು ನೇರವಾಗಿ ಕೈಗೆತ್ತಿಕೊಳ್ಳುವುದರಿಂದ ಅದು ʼಪೆಂಡೋರಾಸ್ ಬಾಕ್ಸ್ʼ ತೆರೆದಂತಾಗಬಹುದು ಎಂದು ಹೇಳಿದ ನ್ಯಾಯಾಲಯ, ಅರ್ಜಿದಾರರು ಎಫ್ಐಆರ್ಗಳ ರದ್ದತಿ ಕೋರಿ ಹೈಕೋರ್ಟ್ ಕದ ತಟ್ಟಬಹುದು ಎಂದು ಹೇಳಿದೆ.
"ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು ಎಂದು ನಮಗೆ ತಿಳಿದಿದೆ" ಎಂದು ಹೇಳಿದ ನ್ಯಾಯಾಲಯ ಅದೇ ಸಮಯ ಪತ್ರಕರ್ತರು ನೇರವಾಗಿ ಸುಪ್ರೀಂ ಕೋರ್ಟಿಗೆ ಬರುವ ಬದಲು ಮೊದಲು ಹೈಕೋರ್ಟಿಗೆ ತೆರಳಬೇಕಿತ್ತು ಎಂದಿದೆ.
ದಿ ವೈರ್ ಸುದ್ದಿ ತಾಣದ ಒಡೆತನ ಹೊಂದಿರುವ ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ ಮತ್ತು ಅದರ ಪತ್ರಕರ್ತರಾದ ಸೇರಜ್ ಆಲಿ, ಮುಕುಲ್ ಸಿಂಗ್ ಚೌಹಾಣ್ ಮತ್ತು ಇಸ್ಮತ್ ಅರಾ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್ ಗವಾಯಿ ಹಾಗೂ ಬಿ.ವಿ ನಾಗರತ್ನ ಅವರ ಪೀಠ ವಿಚಾರಣೆ ನಡೆಸಿದೆ. ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆಯುವ ಅವಕಾಶವನ್ನೂ ಅರ್ಜಿದಾರರಿಗೆ ನೀಡಲಾಗಿದೆ.
ಗಣತಂತ್ರ ದಿನದಂದು ರೈತ ಹೋರಾಟಗಾರನೊಬ್ಬನ ಸಾವು, ಗಾಝಿಯಾಬಾದ್ನಲ್ಲಿ ಮುಸ್ಲಿಂ ವೃದ್ಧನೊಬ್ಬನ ಮೇಲೆ ಹಲ್ಲೆ ಹಾಗೂ ಬಾರಾಬಂಕಿಯಲ್ಲಿ ಮಸೀದಿ ನೆಲಸಮ ಕುರಿತಾದ ವರದಿಗಳಿಗೆ ಸಂಬಂಧಿಸಿದಂತೆ ದಿ ವೈರ್ ವಿರುದ್ಧ ಎಫ್ಐಆರ್ ಗಳು ದಾಖಲಾಗಿದ್ದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ