ಅಂತಿಮವಾಗಿ ಈ ದೇಶ ಕೆಟ್ಟ ಹೆಸರು ಪಡೆಯಲಿದೆ; ನಕಲಿ, ಕೋಮು ಸುದ್ದಿಯ ಬಗ್ಗೆ ಸುಪ್ರೀಂ ಆತಂಕ
ಗುರುವಾರ, 2 ಸೆಪ್ಟಂಬರ್ 2021 (14:11 IST)
ನವದೆಹಲಿ : ಸಾಮಾಜಿಕ ಜಾಲತಾಣಗಳು, ವೆಬ್ ಪೋರ್ಟಲ್ ಗಳಲ್ಲಿ ಕೋಮು ಧ್ವನಿಯ ಸುದ್ದಿಗಳು, ನಕಲಿ ಸುದ್ದಿಗಳು ಹೆಚ್ಚುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿದೆ. "ಕೆಲವು ಚಾನಲ್ ಗಳಲ್ಲಿ ತೋರಿಸಲಾಗುತ್ತಿರುವ ಸುದ್ದಿಗಳೂ ಸಹ ಕೋಮು ಧ್ವನಿಯನ್ನು ಹೊಂದಿರುತ್ತವೆ ಇದು ದೇಶಕ್ಕೆ ಕೆಟ್ಟ ಹೆಸರು ತರುವ ಸಾಧ್ಯತೆ ಇದೆ" ಎಂದು ಕೋರ್ಟ್ ಎಚ್ಚರಿಸಿದೆ.
ಸಿಜೆಐ ನ್ಯಾ. ಎನ್ ವಿ ರಮಣ ಅವರಿದ್ದ ಪೀಠ ಜಮೀಯತ್ ಉಲೆಮಾ-ಐ-ಹಿಂದ್ ಹಾಗೂ ಇನ್ನಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದಾಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮರ್ಕಜ್ ನಿಜಾಮುದ್ದೀನ್ ನ ಧಾರ್ಮಿಕ ಸಮ್ಮೇಳನದ ಬಗ್ಗೆ ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವುದಕ್ಕೆ ತಡೆ ನೀಡಲು ಹಾಗೂ ನಕಲಿ ಸುದ್ದಿಗಳ ಪ್ರಸಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
"ಖಾಸಗಿ ಸುದ್ದಿ ಚಾನಲ್ ಗಳಲ್ಲಿ ಪ್ರಸಾರವಾಗುವ ಸುದ್ದಿಗಳು ಕೋಮು ಬಣ್ಣವನ್ನು ಹೊಂದಿರುತ್ತವೆ, ಕೊನೆಗೆ ಈ ದೇಶ ಕೆಟ್ಟ ಹೆಸರು ಪಡೆಯುವಂತಾಗುತ್ತದೆ. ಈ ಸುದ್ದಿ ವಾಹಿನಿಗಳನ್ನು ನಿಯಂತ್ರಿಸಲು ಯಾವುದಾದರೂ ಪ್ರಯತ್ನ ನಡೆದಿದಾ? ಎಂದು ಕೋರ್ಟ್ ಪ್ರಶ್ನಿಸಿದೆ. "ಸಾಮಾಜಿಕ ಜಾಲತಾಣ ಪ್ರಬಲ ಧ್ವನಿಗಳನ್ನು ಮಾತ್ರ ಆಲಿಸುತ್ತವೆ. ನ್ಯಾಯಾಧೀಶರ ವಿರುದ್ಧ, ಸಂಸ್ಥೆಯ ವಿರುದ್ಧ ಯಾವುದೇ ಹೊಣೆಗಾರಿಕೆ ಇಲ್ಲದೇ ಹಲವಾರು ವಿಷಯಗಳನ್ನು ಬರೆಯಲಾಗುತ್ತದೆ" ಎಂದು ನ್ಯಾ. ಸೂರ್ಯಕಾಂತ್ ಹಾಗೂ ಎಎಸ್ ಬೋಪಣ್ಣ ಅವರಿದ್ದ ಪೀಠ ಹೇಳಿದೆ.
ನಕಲಿ ಸುದ್ದಿಗಳ ಮೇಲೆ, ವೆಬ್ ಪೋರ್ಟಲ್ ಗಳಲ್ಲಿ ಅಪಪ್ರಚಾರದ ಮೇಲೆ, ಯೂಟ್ಯೂಬ್ ಚಾನಲ್ ಗಳ ಮೇಲೆ ನಿಯಂತ್ರಣವಿಲ್ಲ. ಯೂಟ್ಯೂಬ್ ಗೆ ಹೋದಲ್ಲಿ ಅಲ್ಲಿ ನಕಲಿ ಸುದ್ದಿಗಳು ಮುಕ್ತವಾಗಿ ಹಂಚಿಕೆಯಾಗುತ್ತಿರುತ್ತದೆ, ಯೂಟ್ಯೂಬ್ ನಲ್ಲಿ ಯಾರು ಬೇಕಾದರೂ ಚಾನಲ್ ಸೃಷ್ಟಿಸಬಹುದು ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.