ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಹಲ್ಲೆ ನಡೆದಿದೆ ಎಂದು ಆರೋಪಿಸಿರುವ ಸಂಸದೆ ಸ್ವಾತಿ ಮಲಿವಾಲ್ ತನ್ನ ಮೇಲೆ ಮಾನಭಂಗ, ಹಲ್ಲೆ ನಡೆದಿರುವುದು ನಿಜ. ನಾನು ಪಾಲಿಗ್ರಾಫ್ ಗೊಳಗಾಗಲು ಸಿದ್ಧ ಎಂದಿದ್ದಾರೆ.
ಆಪ್ ಸಂಸದೆ ಸ್ವಾತಿ ಮಲಿವಾಲ್ ಕಳೆದ ಕೆಲವು ದಿನಗಳಿಂದ ಕೇಜ್ರಿವಾಲ್ ಮತ್ತು ಆಪ್ ಪಕ್ಷಕ್ಕೆ ಉರುಳಾಗಿದ್ದಾರೆ. ಕೇಜ್ರಿವಾಲ್ ನಿವಾಸದಲ್ಲಿ ಹಲ್ಲೆ ನಡೆದಿದೆ ಎಂದು ಹೇಳುತ್ತಲೇ ಬಂದಿದ್ದಾರೆ. ಈ ಬಗ್ಗೆ ಆಮ್ ಆದ್ಮಿ ಪಕ್ಷ ಮತ್ತು ಸ್ವಾತಿ ಮಲಿವಾಲ್ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಲೇ ಇದೆ.
ರಾಜ್ಯಸಭಾ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ. ರಾಜ್ಯಸಭೆ ಸ್ಥಾನದ ಮೇಲೆ ಮೋಹದಿಂದ ಅಲ್ಲ. ಪ್ರೀತಿಯಿಂದ ಕೇಳಿದ್ದರೆ ಪ್ರಾಣವನ್ನೇ ಕೊಡುತ್ತಿದ್ದೆ. ಆದರೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈಗ ಪ್ರಪಂಚದ ಯಾವುದೇ ಶಕ್ತಿ ಬಂದರೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ರಾಜೀನಾಮೆ ನೀಡಲು ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ಘಟನೆ ಬಳಿಕ ಕೇಜ್ರಿವಾಲ್ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ನನ್ನ ಮೇಲೆ ನಡೆದಿರುವ ದೌರ್ಜನ್ಯಗಳೆಲ್ಲವೂ ನಿಜ. ಕೇಜ್ರಿವಾಲ್ ನಿವಾಸದಲ್ಲೇ ಮಾನಭಂಗವಾಗಿದೆ. ಎಫ್ಐಆರ್ ನಲ್ಲಿ ಹೇಳಿರುವುದೆಲ್ಲಾ ನಿಜ. ನಾನು ಪಾಲಿಗ್ರಾಫ್, ನಾರ್ಕೊ ಪರೀಕ್ಷೆಗೆ ಸಿದ್ಧನಿದ್ದೇನೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.