ಭಾರತ ನಿರ್ಮಿಸಿದ ಸಲ್ಮಾ ಡ್ಯಾಂ ಮೇಲೆ ದಾಳಿಗೆ ತಾಲಿಬಾನ್ ಯತ್ನ!

ಗುರುವಾರ, 5 ಆಗಸ್ಟ್ 2021 (08:09 IST)
ಕಾಬೂಲ್(ಆ.05): ಆಷ್ಘಾನಿಸ್ತಾನವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ತಾಲಿಬಾನ್ ಉಗ್ರರು, ಹೆರಾತ್ ಪ್ರಾಂತ್ಯದಲ್ಲಿ ಭಾರತ ಉಚಿತವಾಗಿ ನಿರ್ಮಿಸಿಕೊಟ್ಟಸಲ್ಮಾ ಅಣೆಕಟ್ಟಿನ ಮೇಲೆ ದಾಳಿ ನಡೆಸಲು ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಆದರೆ ಉಗ್ರರ ಯತ್ನವನ್ನು ಸೇನೆ ವಿಫಲಗೊಳಿಸಿದ ಕಾರಣ, ದೊಡ್ಡ ಅಪಾಯವೊಂದು ತಪ್ಪಿದೆ.

‘ಹೆರಾತ್ ಪ್ರಾಂತ್ಯದಲ್ಲಿರುವ ಸಲ್ಮಾ ಡ್ಯಾಂ ಹೊಡೆದುರುಳಿಸಲು ತಾಲಿಬಾನ್ ಉಗ್ರರು ನಡೆಸಿದ ಪ್ರಯತ್ನ ವಿಫಲವಾಗಿದೆ. ಉಗ್ರರು ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದರು. ಈ ವೇಳೆ ಸೇನೆ ನಡೆಸಿದ ಪ್ರತಿದಾಳಿ ವೇಳೆ ತಾಲಿಬಾನ್ ಉಗ್ರರಲ್ಲಿ ಹಲವರಿಗೆ ತೀವ್ರ ಗಾಯಗಳಾಗಿವೆ. ಅವರು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ರಕ್ಷಣಾ ಇಲಾಖೆಯ ವಕ್ತಾರ ಫವಾದ್ ಅಮಾನ್ ತಿಳಿಸಿದ್ದಾರೆ.
ಸುಮಾರು 75000 ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ ಮತ್ತು 43 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ ಹರಿ ನದಿಗೆ ಅಣೆಕಟ್ಟನ್ನು ಕಟ್ಟಲಾಗಿದೆ. ಸುಮಾರು 2100 ಕೋಟಿ ರು. ವೆಚ್ಚದ ಈ ಅಣೆಕಟ್ಟನ್ನು ಉಭಯ ದೇಶಗಳ ಸ್ನೇಹದ ಸಂಕೇತವಾಗಿ ಭಾರತ ನಿರ್ಮಿಸಿಕೊಟ್ಟಿತ್ತು. 2016ರಲ್ಲಿ ಇದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಆಷ್ಘಾನಿಸ್ತಾನ ಅಧ್ಯಕ್ಷ ಘನಿ ಜಂಟಿಯಾಗಿ ಉದ್ಘಾಟಿಸಿದ್ದರು.
ಇತ್ತೀಚೆಗೆ ಅಮೆರಿಕ ತನ್ನ ಸೇನೆಯನ್ನು ಹಿಂಪಡೆದ ಬಳಿಕ ತಾಲಿಬಾನ್ ಉಗ್ರರ ಜೊತೆ ಮತ್ತೆ ಕೈಜೋಡಿಸಿರುವ ಪಾಕಿಸ್ತಾನ ಸೇನೆ, ಭಾರತ ನಿರ್ಮಿಸಿದ ರಸ್ತೆಗಳು, ಅಣೆಕಟ್ಟು ಮತ್ತು ಇತರೆ ನಿರ್ಮಿತಿಗಳ ಮೇಲೆ ದಾಳಿಗೆ ಉಗ್ರರಿಗೆ ಸೂಚಿಸಿದೆ ಎಂದು ವರದಿಯಾಗಿತ್ತು. ಅದರ ಬೆನ್ನಲ್ಲೇ ಈ ದಾಳಿಯ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ