ಸಮವಸ್ತ್ರದಲ್ಲಿದ್ದ ಮಹಿಳಾ ಪೇದೆ ಮೇಲೆ ಆ್ಯಸಿಡ್ ದಾಳಿ

ಶನಿವಾರ, 24 ಡಿಸೆಂಬರ್ 2016 (11:52 IST)
ಮಹಿಳೆಯರಿಗೆ ಸುರಕ್ಷಿತ ಎಂಬ ಹೆಗ್ಗಳಿಕೆ ಹೊತ್ತಿದ್ದ ನೆರೆ ರಾಜ್ಯ ತಮಿಳುನಾಡಿನಲ್ಲಿ ಇತ್ತೀಚಿಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಶುಕ್ರವಾರ ವೆಲ್ಲೂರಿನ ತಿರುಪತ್ತೂರಿನಲ್ಲಿ ಸಮವಸ್ತ್ರದಲ್ಲಿದ್ದ ಮಹಿಳಾ ಪೇದೆಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಆ್ಯಸಿಡ್ ದಾಳಿ ನಡೆಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
ದಾಳಿಗೊಳಗಾಗಿರುವ ಮಹಿಳಾ ಪೇದೆಯನ್ನು ಲಾವಣ್ಯ (28) ಎಂದು ಗುರುತಿಸಲಾಗಿದ್ದು, ಮಹಿಳಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಶುಕ್ರವಾರ ಕೆಲಸ ಮುಗಿಸಿಕೊಂಡು ಹೋಗುವಾಗ ಮುಸುಕುಧಾರಿ ವ್ಯಕ್ತಿಯೊಬ್ಬ ಆ್ಯಸಿಡ್ ಎರಚಿದ್ದಾನೆ.

ಪರಿಣಾಮ ಅವರ ಮುಖ ಮತ್ತು ಬಲಗೈಗೆ ಗಂಭೀರವಾದ ಗಾಯಗಳಾಗಿದ್ದು ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ್ಯಸಿಡ್ ಎರಚಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದು ಈ ಅಮಾನವೀಯ ಕೃತ್ಯದ ಹಿಂದಿನ ಕಾರಣವೇನೆಂದು ತಿಳಿದು ಬಂದಿಲ್ಲ.
 
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಅಪರಿಚಿತ ಆರೋಪಿಗಳ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ. 

ಸಮವಸ್ತ್ರದಲ್ಲಿದ್ದಾಗಲೇ ದಾಳಿ ನಡೆದಿರುವುದು ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ