ಮುಂಬೈ : ಮೊಬೈಲ್, ಟಿವಿ ಶೋಗಳನ್ನು ನೋಡಿದ್ದ ಬಾಲಕನೊಬ್ಬ ತನ್ನನ್ನು ತಾನೇ ಕಿಡ್ನಾಪ್ ಮಾಡಿಕೊಂಡ ವಿಚಿತ್ರ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.
ಟಿವಿ ಕಾರ್ಯಕ್ರಮದಿಂದ ಪ್ರೇರಣೆಗೊಂಡ 10 ವರ್ಷದ ಬಾಲಕನೊಬ್ಬ ಕಾರ್ಯಕ್ರಮದಲ್ಲಿ ಬಂದ ರೀತಿಯೇ ತನ್ನನ್ನು ತಾನು ಕಿಡ್ನಾಪ್ ಮಾಡಿಕೊಂಡಿದ್ದಾನೆ. ಇದಾದ ಬಳಿಕ ಮನೆಯಲ್ಲಿ ತಾನು ಕಿಡ್ನಾಪ್ ಆಗಿದ್ದೇನೆ ಎಂದು ಒಂದು ಕಥೆಯನ್ನೇ ಕಟ್ಟಿದ್ದಾನೆ. ಇದರಿಂದ ಆತಂಕಗೊಂಡ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಸುಳ್ಳು ಕಿಡ್ನಾಪ್ ಬಗ್ಗೆ ಸ್ವಲ್ಪವೂ ಸುಳಿವು ಸಿಕ್ಕಿರಲಿಲ್ಲ. ಅಷ್ಟೇ ಅಲ್ಲದೇ ತನಿಖೆಯನ್ನು ಪ್ರಾರಂಭಿಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದರೂ ಯಾವುದೇ ಪ್ರಯೋಜನವೂ ಆಗಿರಲಿಲ್ಲ. ಇದಾದ ಬಳಿಕ ಆ ಬಾಲಕ ಚಂದ್ರಾಪುರ ಸಮೀಪದ ಪಡೋಲಿ ಎಂಬಲ್ಲಿ ಸಿಕ್ಕಿದ್ದಾನೆ.
ಬಾಲಕನನ್ನು ಘಟನೆ ಸಂಬಂಧಿಸಿ ಯಾರು ಅಪಹರಣ ಮಾಡಿದವರು, ಏಕೆ ಅಪಹರಿಸಿದ್ದಾರೆ ಎಂಬೆಲ್ಲಾ ಪ್ರಶ್ನೆಯನ್ನು ಕೇಳಿದ್ದಾರೆ. ಆದರೂ ಆತ ಉತ್ತರಿಸಲಿಲ್ಲ. ಇದಾದ ಬಳಿಕ ಬಾಲಕನ ವಿಶ್ವಾಸ ಗಳಿಸಿ ಆತನಿಂದ ಮಾಹಿತಿ ಪಡೆಯಲು ಯತ್ನಿಸಿದ್ದಾರೆ.