ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಿರಿಕಿರಿಯಿಲ್ಲದೆ ಪ್ರಯಾಣಕ್ಕೆ ಅನುಕೂಲವಾಗುವಂತೆ ಫಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಕುರಿತು ಕೇಂದ್ರ ಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ. ವಾರ್ಷಿಕ 3 ಸಾವಿರ ರೂಪಾಯಿಗೆ ಟೋಲ್ ಪಾಸ್ ನೀಡಲು ಸರ್ಕಾರ ಮುಂದಾಗಿದ್ದು, ಆಗಸ್ಟ್ 15 ರಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ನಿತಿನ್ ಗಡ್ಕರಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಫಾಸ್ಟ್ ಟ್ಯಾಗ್ ಆಧರಿತ ವಾರ್ಷಿಕ ಪಾಸ್ ಬಗ್ಗೆ ವಿವರವನ್ನು ಹಂಚಿಕೊಂಡಿದ್ದಾರೆ. ₹ 3 ಸಾವಿರ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದು ಆಗಸ್ಟ್ 15, 2025 ರಿಂದ ಜಾರಿಗೆ ಬರುತ್ತದೆ. ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್ಗಳವರೆಗೆ ಮಾನ್ಯವಾಗಿರುತ್ತದೆ.
ಈ ಪಾಸ್ನಿಂದ 60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳು ಪರಿಹಾರವಾಗಲಿದೆ. ಟೋಲ್ಗಳಲ್ಲಿ ಕಾಯುವ ಸಮಯ ಮತ್ತು ದಟ್ಟಣೆ ಕಡಿಮೆಯಾಗಲಿದೆ.