ಲಕ್ನೋ : ವಧುವೊಬ್ಬಳು 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾಳೆ ಎಂಬ ಕಾರಣಕ್ಕೆ ವರನೊಬ್ಬ ಮದುವೆಯಾಗಲು ನಿರಾಕರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ವಧುವಿನ ಕುಟುಂಬಸ್ಥರು ವರದಕ್ಷಿಣೆ ಬೇಡಿಕೆ ಈಡೇರಿಸದ ಕಾರಣ ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ.
ಆದರೆ 12ನೇ ತರಗತಿ ಅಂಕಪಟ್ಟಿಯಲ್ಲಿ ಬಾಲಕಿಗೆ ಕಡಿಮೆ ಅಂಕ ಬಂದಿದೆ. ಇದರಿಂದಾಗಿ ಮದುವೆಯನ್ನು ರದ್ದು ಮಾಡಲಾಗಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ.
ಬಾಗನವಾ ಗ್ರಾಮದ ರಾಮಶಂಕರ್ ಎಂಬುವವರ ಪುತ್ರ ಸೋನು ಎಂಬಾತನೊಂದಿಗೆ ಸೋನಿ ಎಂಬಾಕೆಯ ಮದುವೆಯನ್ನು ನಿಶ್ಚಯಿಸಲಾಗಿತ್ತು. ವಧುವಿನ ಕುಟುಂಬಸ್ಥರು 60 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ವರನಿಗೆ 15 ಸಾವಿರ ಮೌಲ್ಯದ ಬಂಗಾರದ ಉಂಗುರ ಕೂಡ ನೀಡಿ ಮದುವೆ ಸಮಾರಂಭ ಏರ್ಪಡಿಸಿದ್ದರು.
ಮರುದಿನವೇ ವರನ ಮನೆಯವರು ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ವಧುವಿನ ತಂದೆ ಹೆಚ್ಚಿನ ವರದಕ್ಷಿಣೆ ನೀಡಲು ಆಗದಿದ್ದರಿಂದ ವರನ ಕುಟುಂಬವು ಹುಡುಗಿಗೆ 12ನೇ ತರಗತಿಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮದುವೆಯನ್ನು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.