ಸರ್ಕಾರಿ ಅಧಿಕಾರಿಗಳ ಛಳಿ ಬಿಡಿಸಿದ ಹೈಕೋರ್ಟ್

ಮಂಗಳವಾರ, 9 ನವೆಂಬರ್ 2021 (09:06 IST)
ಬೆಂಗಳೂರು : ಕೋರ್ಟ್ ಆದೇಶಗಳನ್ನು ಪಾಲನೆ ಮಾಡದ ಮತ್ತು ಖುದ್ದು ವಿಚಾರಣೆಗೆ ಹಾಜರಾಗಬೇಕೆಂದು ನಿರ್ದೇಶನವಿದ್ದರೂ ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಹೈಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ, ಇಂಥ ದುರ್ವರ್ತನೆ ಪ್ರದರ್ಶಿಸುವ ಅಧಿಕಾರಿಗಳನ್ನು ಡಿಜಿಪಿಗೆ ಆದೇಶಿಸಿ ಬಂಧಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ, ಹೈಕೋರ್ಟ್ ಎಂದರೇನೆಂದು ತೋರಿಸಬೇಕಾಗುತ್ತದೆ, ತಕ್ಕ ಪಾಠ ಕಲಿಸಿ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಗೆ ಮೂಲಸೌಕರ್ಯ ಒದಗಿಸುವ ಹಾಗೂ ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಕೋರಿದ್ದ ಪಿಐಎಲ್ ವಿಚಾರಣೆ ವೇಳೆ, ವೈದ್ಯಕೀಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಇಬ್ಬರೂ ಗೈರು ಹಾಜರಾಗಿದ್ದಕ್ಕೆ ಕೋರ್ಟ್ ಕಿಡಿಕಾರಿತು.
ಡಿಮ್ಹಾನ್ಸ್ಗೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಬಂದಾಗ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಚಿವ ಸಂಪುಟ ಸಭೆಗೆ ಹಾಜರಾಗಲು ತೆರಳಿದ್ದಾರೆ. ಹಾಗಾಗಿ ಕೋರ್ಟ್ಗೆ ಹಾಜರಾಗಿಲ್ಲ ಎಂದು ಸರಕಾರಿ ವಕೀಲರು ಹೇಳಿದಾಗ ಸಿಟ್ಟಿಗೆದ್ದ ಸಿಜೆ ರಿತುರಾಜ್ ಅವಸ್ಥಿ, ಅವರಿಗೆ ಅಲ್ಲಿಗೆ ಹೋಗಲು ಹೇಳಿದ್ದು ಯಾರು? ಕೋರ್ಟ್ ಆದೇಶ ಪಾಲನೆ ಮಾಡಲ್ಲ, ಖುದ್ದು ಹಾಜರು ಆಗುವುದಿಲ್ಲ. ಇದನ್ನು ನೋಡಿ ಸುಮ್ಮನೆ ಇರಲು ಸಾಧ್ಯವಿಲ್ಲ. ಕೋರ್ಟ್ಗೆ ಬರಲು ಹೇಳಿ, ಇಲ್ಲ ಅಂದರೆ ಪೊಲೀಸರಿಗೆ ಹೇಳಿ ಬಂಧಿಸಿ ಕರೆಸಬೇಕಾಗುತ್ತದೆ ಎಂದು ಹೇಳಿದರು. ಬಳಿಕ ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ಬಂದಾಗಲೂ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಜರಿರಲಿಲ್ಲ. ಮತ್ತೆ ಸರಕಾರಿ ಸ್ವಲ್ಪ ಕಾಲಾವಕಾಶಬೇಕು ಎಂದರು. ಮತ್ತೆ ಕೆಂಡಾಮಂದಲವಾದ ಸಿಜೆ, ಮಧ್ಯಾಹ್ನ 2.30ಕ್ಕೆ ಇಬ್ಬರೂ ಅಧಿಕಾರಿಗಳು ಹಾಜರಿರಬೇಕು, ಖುದ್ದು ವಿವರಣೆ ನೀಡಲು ಅಡ್ವೋಕೇಟ್ ಜನರಲ್ ಕೂಡ ಹಾಜರಾಗಬೇಕೆಂದು ಆದೇಶಿಸಿದರು. ಮಧ್ಯಾಹ್ನ ಕಲಾಪ ಆರಂಭವಾದಾಗ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಅಧಿಕಾರಿಗಳ ಪರ ಕೋರ್ಟ್ ಕ್ಷಮೆ ಕೇಳಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ