ಮುಂಬೈನಲ್ಲಿ ಒಂದು ತಿಂಗಳ ಕಾಲ ಡ್ರೋನ್, ಪ್ಯಾರಾಗ್ಲೈಡರ್‌ ಹಾರಾಟಕ್ಕೆ ನಿಷೇಧ, ಕಾರಣ ಹೀಗಿದೆ

Sampriya

ಮಂಗಳವಾರ, 29 ಅಕ್ಟೋಬರ್ 2024 (18:31 IST)
Photo Courtesy X
ಮುಂಬೈ: ನಗರದಲ್ಲಿ ಹಾರುವ ಡ್ರೋನ್‌ಗಳು, ರಿಮೋಟ್ ಕಂಟ್ರೋಲ್ ಮೈಕ್ರೋಲೈಟ್ ಏರ್‌ಕ್ರಾಫ್ಟ್‌ಗಳು, ಪ್ಯಾರಾಗ್ಲೈಡರ್‌ಗಳು ಮತ್ತು ಹಾಟ್ ಏರ್ ಬಲೂನ್‌ಗಳ ಹಾರಾಟವನ್ನು ಒಂದು ತಿಂಗಳ ಕಾಲ ನಿಷೇಧ ಮಾಡಲಾಗಿದೆ.

ಪೊಲೀಸರು ಸೋಮವಾರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಿತ ಆದೇಶವನ್ನು ಹೊರಡಿಸಿದ್ದಾರೆ ಮತ್ತು ಇದು ಅಕ್ಟೋಬರ್ 31 ರಿಂದ ನವೆಂಬರ್ 29 ರವರೆಗೆ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದೇಶದ ಪ್ರಕಾರ, ಭಯೋತ್ಪಾದಕರು ಮತ್ತು ಸಮಾಜವಿರೋಧಿಗಳು ಮುಂಬೈ ಪೊಲೀಸ್ ಕಮಿಷನರೇಟ್ ಪ್ರದೇಶದಲ್ಲಿ ವಿವಿಐಪಿಗಳನ್ನು ಗುರಿಯಾಗಿಸಲು, ಜನರ ಪ್ರಾಣಕ್ಕೆ ಅಪಾಯವನ್ನುಂಟುಮಾಡಲು ಮತ್ತು ಸಾರ್ವಜನಿಕ ಆಸ್ತಿಯನ್ನು ನಾಶಮಾಡಲು ತಮ್ಮ ದಾಳಿಯಲ್ಲಿ ಡ್ರೋನ್‌ಗಳು, ರಿಮೋಟ್-ನಿಯಂತ್ರಿತ ಮೈಕ್ರೋಲೈಟ್ ಏರ್‌ಕ್ರಾಫ್ಟ್ ಮತ್ತು ಪ್ಯಾರಾಗ್ಲೈಡರ್‌ಗಳನ್ನು ಬಳಸಬಹುದು. ಈ ಹಿನ್ನೆಲೆ ಇದೀಗ ಆದೇಶವನ್ನು ಹೊರಡಿಸಲಾಗಿದೆ.

ಹಾರುವ ವಸ್ತುಗಳ ಮೂಲಕ ಸಂಭವನೀಯ ವಿಧ್ವಂಸಕ ಕೃತ್ಯಗಳನ್ನು ತಡೆಯಲು ಕೆಲವು ನಿರ್ಬಂಧಗಳು ಅಗತ್ಯ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನು ಪರಿಗಣಿಸಿ, ಪೊಲೀಸರ ವೈಮಾನಿಕ ಕಣ್ಗಾವಲು ಅಥವಾ ಡಿಸಿಪಿ (ಕಾರ್ಯಾಚರಣೆ) ಯ ನಿರ್ದಿಷ್ಟ ಅನುಮತಿಯನ್ನು ಹೊರತುಪಡಿಸಿ ಡ್ರೋನ್‌ಗಳು, ರಿಮೋಟ್-ನಿಯಂತ್ರಿತ ಮೈಕ್ರೋಲೈಟ್ ಏರ್‌ಕ್ರಾಫ್ಟ್ ಮತ್ತು ಪ್ಯಾರಾಗ್ಲೈಡರ್‌ಗಳ ಹಾರಾಟ ಚಟುವಟಿಕೆಗಳನ್ನು ಮುಂಬೈ ಪೊಲೀಸರ ವ್ಯಾಪ್ತಿಯಲ್ಲಿ ಅನುಮತಿಸಲಾಗುವುದಿಲ್ಲ.

ಉಲ್ಲಂಘಿಸುವವರಿಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223 (ಸಾರ್ವಜನಿಕ ಸೇವಕ ನೀಡಿದ ಆದೇಶದ ಉಲ್ಲಂಘನೆ) ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್‌ 20ರಂದು ಒಂದೇ ಹಂತದಲ್ಲಿ ಚುನಾವಣೆ ನಿಗದಿಯಾಗಿದೆ. 23ರಂದು ಫಲಿತಾಂಶ ಹೊರಬೀಳಲಿದೆ. ಜತೆಗೆ, ನವೆಂಬರ್ 26ರಂದು (26‌‌‌‌/11) ಮುಂಬೈಯಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗೆ 16 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಮುಂಬೈನಗರ ಬಿಗಿ ಪೊಲೀಸ್ ಭದ್ರತೆಗೆ ಸಾಕ್ಷಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ