ಹೈದರಾಬಾದ್: ದೇಶದ ಅತ್ಯಂತ ಶ್ರೀಮಂತ ದೇವಾಲಯ ತಿರುಪತಿಯಲ್ಲಿ ಭಕ್ತರಿಗೆ ಕ್ಷೌರ ಮಾಡಿಸಿದ್ದಕ್ಕೆ ಹಣ ಪಡೆಯುತ್ತಿದ್ದ 243 ಕ್ಷೌರಿಕರನ್ನು ಟಿಟಿಡಿ ಆಡಳಿತ ಮಂಡಳಿ ನೊಟೀಸ್ ನೀಡಿ ವಜಾ ಮಾಡಿದೆ. ಈ ಕ್ರಮದ ವಿರುದ್ಧ ಕ್ಷೌರಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
943 ಕ್ಷೌರಿಕರನ್ನು ಕಾಂಟ್ರಾಕ್ಟ್ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು. ದೇವಾಲಯದ ಸಮೀಪದಲ್ಲಿರುವ ಕಲ್ಯಾಣ ಕಟ್ಟಡದಲ್ಲಿ ಭಕ್ತರಿಗೆ ಕ್ಷೌರ ಮಾಡಿಸಲಾಗುತ್ತಿತ್ತು. ಭಕ್ತರು ರಸೀದಿ ಮಾಡಿಸಿಕೊಂಡು ಕ್ಷೌರ ಮಾಡಿಕೊಳ್ಳುತ್ತಿದ್ದರು. ರಸೀದಿ ಮಾಡಿಸಿದ ನಂತರವೂ ಕ್ಷೌರಿಕರು 10 ರೂ. ನಿಂದ 50 ರೂ. ಹಣ ಪಡೆಯುತ್ತಿದ್ದರು. ಹೀಗಾಗಿ ಕ್ಷೌರಿಕರನ್ನು ವಜಾ ಮಾಡಲಾಗಿದೆ ಎಂದು ಟಿಟಿಡಿ ತಿಳಿಸಿದೆ.
ಸದ್ಯ ವಜಾಗೊಂಡ ಕ್ಷೌರಿಕರು, ಟಿಟಿಡಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದು, ಜೀವನೋಪಾಯಕ್ಕಿದ್ದ ಉದ್ಯೋಗದಿಂದ ವಜಾ ಮಾಡಿರುವುದರಿಂದ ದಿಕ್ಕು ತೋಚದಂತಾಗಿದೆ ಎಂದು ಆಗ್ರಹಿಸಿದ್ದಾರೆ.